ಮರಳು ಟಿಪ್ಪರ್ ಗಳ ಹೆಚ್ಚಿನ ಓಡಾಟ | ಬುದ್ದಿನ್ನಿ ಸೇತುವೆ ಬಿರುಕು : ಸ್ಥಗಿತಗೊಂಡ ಸಂಚಾರ !
ರಾಯಚೂರು : ಜಿಲ್ಲೆ ಮಸ್ಕಿ ತಾಲ್ಲೂಕಿನ ಬಳಗನೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ತಿಂಗಳುಗಳಿಂದ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದ್ದು, ಅದರ ಪರಿಣಾಮವಾಗಿ ಬುದ್ದಿನ್ನಿ ಗ್ರಾಮದ ಬಳಿಯ ಸೇತುವೆ ಬಿರುಕು ಬಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಸ್ಥಳೀಯರು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಅನೇಕ ಬಾರಿ ದೂರು ನೀಡಿದರೂ, ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದಕ್ಕೆ ಜನರಲ್ಲಿ ಆಕ್ರೋಶ ವ್ಯಕ್ತವಾಗಿದೆ.
ರಾಯಲ್ಟಿ ಇಲ್ಲದೇ ಮರಳು ಸಾಗಣೆ ನಡೆಯುತ್ತಿರುವುದರಿಂದ ಹಾಗೂ ನಿಗದಿಗಿಂತ ದುಪ್ಪಟ್ಟು ಮರಳು ಹೊತ್ತ ಟಿಪ್ಪರುಗಳು ನಿರಂತರ ಓಡಾಡುತ್ತಿರುವ ಪರಿಣಾಮ ರಸ್ತೆಗಳು ಹಾಳಾಗಿವೆ. ಹಗಲು-ರಾತ್ರಿ ನಿರಂತರವಾಗಿ ವಾಹನ ಸಂಚರಿಸುತ್ತಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಕೂಡಲೇ ರಸ್ತೆ ದುರಸ್ತಿ ಮಾಡಬೇಕು ಹಾಗೂ ಅಕ್ರಮ ಮರಳು ದಂಧೆ ತಡೆಗಟ್ಟಬೇಕು. ನಿರ್ಲಕ್ಷ್ಯ ಮುಂದುವರಿದರೆ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಂ.ಗಂಗಾಧರ, ಹನುಮಂತರಾಯ ಕಟ್ಟಿಮನಿ ಮತ್ತು ಮಹೇಶ್ ಗೌಡ ಮಾಧ್ಯಮಗಳಿಗೆ ತಿಳಿಸಿದರು.