ಬೆಳೆ ಹಾನಿಗೆ ಅದೇ ವರ್ಷ ವಿಮೆ ಪರಿಹಾರ ಘೋಷಿಸಬೇಕು: ಶಾಸಕ ಬಸನಗೌಡ ದದ್ದಲ್

"ವಿಮಾ ಹಣ ಪಾವತಿಗೆ ಮಾನದಂಡ ಬದಲಾಗಬೇಕು"

Update: 2026-08-07 20:24 IST

ರಾಯಚೂರು, ಆ.8: ವಿಮಾ ಕಂತು ಪಾವತಿಸುವ ರೈತರಿಗೆ ವಿಮಾ ಕಂಪನಿಗಳು ಪರಿಹಾರ ನೀಡುವ ವೇಳೆ ನಿಗದಿಪಡಿಸಿರುವ ಮಾನದಂಡಗಳನ್ನು ಸಡಿಲಗೊಳಿಸಿ, ಆಯಾ ವರ್ಷ ಬೆಳೆ ಹಾನಿಯಾಗಿದ್ದರೆ ಅದೇ ವರ್ಷ ವಿಮೆ ಪರಿಹಾರ ಘೋಷಿಸಬೇಕು ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಆಗ್ರಹಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಯಚೂರು ಭಾಗವು ಪ್ರಮುಖ ಹತ್ತಿ ಬೆಳೆಯ ಪ್ರದೇಶವಾಗಿದೆ. ಈ ವರ್ಷ ಮಳೆ ಕೊರತೆಯಿಂದ ಸುಮಾರು ಶೇ.95ರಷ್ಟು ಬೆಳೆ ಹಾನಿಯಾಗಿದೆ. ರೈತರು ಮೂರು ಬಾರಿ ಬಿತ್ತನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿ, ಪ್ರತಿ ಎಕರೆಗೆ ಸುಮಾರು 25 ಸಾವಿರ ರೂ. ವೆಚ್ಚವಾಗಿದೆ. ಹೀಗಾಗಿ ಜಿಲ್ಲೆಯನ್ನು ತಕ್ಷಣ ಬರಪೀಡಿತ ಎಂದು ಘೋಷಿಸಿದರೆ ಮಾತ್ರ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನ ಜಿಲ್ಲೆಗೆ ಸಿಗಲಿ :

ಸಚಿವ ಸಂಪುಟದಲ್ಲಿ ಜಿಲ್ಲೆಯ ನಾಲ್ವರು ಶಾಸಕರಿಗೆ ಅವಕಾಶ ಸಿಗಬೇಕಿತ್ತು. ಆದರೆ ಹೈಕಮಾಂಡ್ ಸಚಿವ ಸ್ಥಾನ ನೀಡಿಲ್ಲ. ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳು ಸಿಗಬಹುದು ಎಂಬ ವಿಶ್ವಾಸವಿದೆ. ಕನಿಷ್ಠ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅಧ್ಯಕ್ಷ ಸ್ಥಾನವಾದರೂ ಜಿಲ್ಲೆಯ ಒಬ್ಬ ಶಾಸಕರಿಗೆ ನೀಡಬೇಕು ಎಂದು ನಾನು ಬಯಸುತ್ತೇನೆ ಎಂದು ಬಸನಗೌಡ ದದ್ದಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News