Raichur | ಕರಿಯಪ್ಪ ತಾತಾ ಜಾತ್ರೆಗೆ ಅಗತ್ಯ ಸೌಲಭ್ಯ ಕಲ್ಪಿಸಿ: ಅಧಿಕಾರಿಗಳಿಗೆ ಶಾಸಕ ಬಸನಗೌಡ ದದ್ದಲ್ ಸೂಚನೆ
ರಾಯಚೂರು : ಕಲ್ಮಲಾ ಗ್ರಾಮದ ಕರಿಯಪ್ಪ ತಾತಾ ಜಾತ್ರೆಗೆ ಆಗಮಿಸುವ ಭಕ್ತರಿಗೆ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳಲ್ಲಿ ಯಾವುದೇ ಕೊರತೆ ಉಂಟಾಗದಂತೆ ಅಧಿಕಾರಿಗಳು ಸಮರ್ಪಕ ಸಿದ್ಧತೆ ಮಾಡಿಕೊಳ್ಳಬೇಕು ಎಂದು ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಸೂಚಿಸಿದರು.
ರಾಯಚೂರು ತಾಲೂಕಿನ ಕಲ್ಮಲಾ ಗ್ರಾಮದಲ್ಲಿ ನಡೆದ ಕರಿಯಪ್ಪ ತಾತಾ ಜಾತ್ರೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವರ್ಷ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಇದ್ದರೂ ಪ್ರತಿವರ್ಷದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸುವ ನಿರೀಕ್ಷೆಯಿದೆ. ಭಕ್ತರ ನಂಬಿಕೆ ಹಾಗೂ ಧಾರ್ಮಿಕ ಆಚರಣೆಗಳಿಗೆ ಯಾವುದೇ ಧಕ್ಕೆಯಾಗದಂತೆ ದೇವಸ್ಥಾನದ ಟ್ರಸ್ಟಿಗಳು ಮತ್ತು ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಜಾತ್ರೆಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಎರಡು ಮಾರ್ಗಗಳಲ್ಲಿ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಯ ವೇಳೆ ವಿದ್ಯುತ್ ಪೂರೈಕೆ, ಕುಡಿಯುವ ನೀರು, ಸ್ವಚ್ಛತೆ, ಆರೋಗ್ಯ ಸೇವೆ, ತುರ್ತು ವೈದ್ಯಕೀಯ ನೆರವು, ಪೊಲೀಸ್ ಭದ್ರತೆ, ಸಂಚಾರ ನಿಯಂತ್ರಣ, ವಾಹನ ನಿಲುಗಡೆ ಹಾಗೂ ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ದೇವಸ್ಥಾನದಿಂದ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ಸಿಸಿ ರಸ್ತೆ ಈಗಾಗಲೇ ನಿರ್ಮಾಣಗೊಂಡಿದ್ದು, ವಿದ್ಯುತ್ ದೀಪಾಲಂಕಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಇರುವುದರಿಂದ ಅಗತ್ಯಕ್ಕೆ ತಕ್ಕಷ್ಟು ಬಸ್‌ಗಳನ್ನು ನಿಯೋಜಿಸುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್ ಮಾತನಾಡಿ, ಗ್ರಾಮ ಪಂಚಾಯಿತಿಗೆ ಲಭ್ಯವಿರುವ ಅನುದಾನದ ವ್ಯಾಪ್ತಿಯಲ್ಲಿ ಜಾತ್ರೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯ ಸಂದರ್ಭದಲ್ಲಿ ಕರಿಯಪ್ಪ ತಾತಾ ಜಾತ್ರಾ ಮಹೋತ್ಸವದ ವಾಲ್ ಪೋಸ್ಟರ್‌ನ್ನು ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ತಹಶೀಲ್ದಾರ ಸುರೇಶ್ ವರ್ಮಾ, ಜಾತ್ರಾ ಸಮಿತಿ ಸದಸ್ಯರು, ಗ್ರಾಮಸ್ಥರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.