ನೋಟಿಸ್ ನೀಡದೇ ನನ್ನ ಪಿಎ ಪ್ರವೀಣಕುಮಾರ್ ರನ್ನು ಅಮಾನತು ಮಾಡಿರುವುದು ಖಂಡನೀಯ: ಶಾಸಕ ಮಾನಪ್ಪ ವಜ್ಜಲ್ ಅಸಮಾಧಾನ
ರಾಯಚೂರು: ನನ್ನ ಪಿಎ ಪ್ರವೀಣಕುಮಾರ್ ಅವರನ್ನು ನೋಟಿಸ್ ನೀಡದೇ ಅಮಾನತು ಮಾಡಿರುವುದು ಖಂಡನೀಯ ಎಂದು ಶಾಸಕ ಮಾನಪ್ಪ ವಜ್ಜಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಿಡಿಒ ಹಾಗೂ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ್ ಅವರ ಪಿಎ ಕೂಡಾ ಆಗಿರುವ ಪ್ರವೀಣಕುಮಾರ್ ಅವರನ್ನು ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗಿಯಾಗಿದ್ದಕ್ಕೆ ಅಮಾನತುಗೊಳಿಸಲಾಗಿತ್ತು.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಶಾಸಕ ಮಾನಪ್ಪ ವಜ್ಜಲ್, ಏಕಾಏಕಿ ಅಮಾನತು ಮಾಡಿದ್ದು ಸರಿಯಲ್ಲ. ಕನಿಷ್ಠ ಪಕ್ಷ ನೋಟೀಸ್ ಆದರೂ ನೀಡಬೇಕಿತ್ತು. ಕೂಡಲೇ ಅಮಾನತು ಆದೇಶ ರದ್ದುಪಡಿಸುವಂತೆ ಶಾಸಕ ಮಾನಪ್ಪ ವಜ್ಜಲ್ ಮನವಿ ಮಾಡಿದ್ದಾರೆ.
ರಾಜ್ಯ ಸೇರಿ ದೇಶದ ಹಲವೆಡೆ ಸರ್ಕಾರಿ ನೌಕರರು ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅದರಂತೆ ನನ್ನ ಪಿಎ ಕೂಡ ಭಾಗವಹಿಸಿದ್ದಾನೆ. ಇದು ತಪ್ಪಾಗಿದ್ದರೆ ಸರ್ಕಾರ ನೋಟೀಸ್ ನೀಡಿ ಎಚ್ಚರಿಕೆ ಕೊಡಬೇಕಿತ್ತು. ಇದ್ಯಾವುದನ್ನೂ ಮಾಡದೇ ಏಕಾಏಕಿ ಅಮಾನತು ಮಾಡಿದ್ದು ಅನ್ಯಾಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.