×
Ad

ಬೆಂಬಲ ಬೆಲೆಯಲ್ಲಿ ಮೆಣಸಿನಕಾಯಿ ಖರೀದಿಗೆ ಅನುಮತಿ : ಸಂಸದ ಜಿ.ಕುಮಾರ ನಾಯಕ

Update: 2025-05-09 20:38 IST

ರಾಯಚೂರು: ಮೆಣಸಿನಕಾಯಿ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ರೈತರಿಂದ ಖರೀದಿಸಬೇಕು ಹಾಗೂ ರೈತರ ಹಿತರಕ್ಷಣೆಗಾಗಿ ನಿರಂತರವಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಾಯ ಮಾಡಿದ ಪರಿಣಾಮವಾಗಿ ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ರೈತರು ಬೆಳೆದ ಮೆಣಸಿನಕಾಯಿಯನ್ನು ನಿಗದಿತ ಬೆಂಬಲ ಬೆಲೆಗೆ ಖರೀದಿಸಲು ಸಮ್ಮತಿಸಿದೆ ಎಂದು ಸಂಸದ ಜಿ.ಕುಮಾರ ನಾಯಕ ಅವರು ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.11ರಂದು ಕೇಂದ್ರ ಬಜೆಟ್ ಚರ್ಚೆಯ ಸಂದರ್ಭದಲ್ಲಿ ರಾಜ್ಯದ ಮೆಣಸಿನಕಾಯಿ ಬೆಳೆಗಾರರ ಸಮಸ್ಯೆಯನ್ನು ಪ್ರಸ್ತಾಪಿಸಿ, ನಮ್ಮ ರೈತರನ್ನು ರಕ್ಷಣೆಗಾಗಿ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಲಾಗಿತ್ತು ಎಂದು ತಿಳಿಸಿದರು.

ಕೆಂಪು ಮೆಣಸಿನಕಾಯಿ ಇಳುವರಿ ಉತ್ತಮವಾದರೂ ಕೂಡ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದರು. ಅದರಲ್ಲೂ ರಾಯಚೂರು ಮತ್ತು ಯಾದಗಿರಿಯ ಸಾವಿರಾರು ರೈತರ ಜೀವನದ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತಿರುವ ಬಗ್ಗೆ ರಾಜ್ಯ ಮತ್ತು ಕೇಂದ್ರ ಸಚಿವರೊಂದಿಗೆ ಸಭೆ ನಡೆಸಲಾಗಿತ್ತು ಎಂದು ವಿವರಿಸಿದರು.

ಕೇಂದ್ರದ ಕೃಷಿ ಮಂತ್ರಾಲಯ ರಾಜ್ಯದ ಸಹಯೋಗದೊಂದಿಗೆ ಖರೀದಿ ಅವಕಾಶ ನೀಡಿದೆ. ಅನೇಕ ಷರತ್ತುಗಳ ಮೇಲೆ ಪ್ರತಿ ರೈತರ ಪ್ರತಿಶತ 25 ರಷ್ಟು ಬೆಳೆಯನ್ನು ಖರೀದಿಸಲು ಅವಕಾಶ ನೀಡಲಾಗಿದೆ. ರಾಜ್ಯ ಸರ್ಕಾರ ಕೂಡಲೇ ಮಾರುಕಟ್ಟೆಗೆ ಆವಕವಾಗುವ ಮೆಣಿಸಿನಕಾಯಿ ಬೆಳೆ ಖರೀದಿಗೆ ಕೃಷಿ ಇಲಾಖೆ ಅಧೀನ ಕಾರ್ಯದರ್ಶಿ ಒಳಗೊಂಡ ಸಮಿತಿ ಸಹ ರಚಿಸಲಾಗಿದೆ. ದೇಶದಲ್ಲಿಯೇ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಮಾತ್ರ ಖರೀದಿಗೆ ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.

ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದಾಗ ಮಧ್ಯಪ್ರವೇಶಿಸುವ (ಎಂಐಎಸ್) ಯೋಜನೆಯಡಿ ಪ್ರತಿಕ್ವಿಂಟಾಲ್‍ಗೆ 10,589 ರೂ. ದರದಲ್ಲಿ ಖರೀದಿಸಲು ಕೇಂದ್ರ ರೈತ ಮಂತ್ರಾಲಯ ಆದೇಶ ನೀಡಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಮುಖಂಡರಾದ ಕೆ.ಶಾಂತಪ್ಪ, ಜಯಣ್ಣ, ಜಿ.ಶಿವಮೂರ್ತಿ,ರವ ಬೋಸರಾಜು, ಮಹಮ್ಮದ್ ಶಾಲಂ, ರುದ್ರಪ್ಪ ಅಂಗಡಿ, ಜಯಂತ್‍ರಾವ್ ಪತಂಗೆ, ಅಮರೇಗೌಡ ಅಂಚಿನಾಳ್, ಮಾಡಿಗಿರಿ ನರಸಿಂಹಲು,ಶ್ರೀನಿವಾಸ್ ರೆಡ್ಡಿ ಹಾಗೂ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News