ಲಿಂಗಸೂಗೂರು | ನಾಪತ್ತೆಯಾಗಿ ಆತಂಕ ಮೂಡಿಸಿದ್ದ ಮೂವರು ಮಕ್ಕಳನ್ನು ಪತ್ತೆಹಚ್ಚಿದ ಪೊಲೀಸರು
ಲಿಂಗಸೂಗೂರು : ನಾಪತ್ತೆಯಾಗಿದ್ದ ಮೂವರು ಅಪ್ರಾಪ್ತ ವಯಸ್ಸಿನ ಬಾಲಕರನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜೂ.6ರಂದು ಲಿಂಗಸೂಗೂರು ತಾಲೂಕಿನ ಕರಡಕಲ್ ಗ್ರಾಮದ ಮೂವರು ಮಕ್ಕಳು ಕಾಣೆಯಾಗಿರುವ ಬಗ್ಗೆ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೂವರು ಮಕ್ಕಳನ್ನು ಪತ್ತೆಹಚ್ಚಲು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಂ.ಪುಟ್ಟಮಾದಯ್ಯ, ಹೆಚ್ಚುವರಿ ಜಿಲ್ಲಾ ಎಸ್.ಪಿ ಜಿ.ಹರೀಶ್ ಮತ್ತು ಡಿವೈಎಸ್‌ಪಿ ದತ್ತಾತ್ರೆಯ ಅವರ ಮಾರ್ಗದರ್ಶನದಲ್ಲಿ ಲಿಂಗಸೂಗೂರು ಇನ್‌ಸ್ಪೆಕ್ಟರ್ ಪುಂಡಲೀಕ ಎಂ.ಪಟಾತರ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಿ ಕಾರ್ಯಾಚರಣೆ ಆರಂಭಿಸಲಾಯಿತು. ಈ ತಂಡದಲ್ಲಿ ಎಸ್.ಹೆಚ್.ಸಿ ಈರಣ್ಯ, ಭರಮನಗೌಡ, ಸಿಪಿಸಿ ಶ್ರೀಕಾಂತ, ಬೀಮಣ್ಣ ಮತ್ತು ಸಿದ್ದಪ್ಪ ಪಾಲ್ಗೊಂಡಿದ್ದರು.
ಮಾಹಿತಿ ಸಂಗ್ರಹದ ನಂತರ ಮೂವರು ಮಕ್ಕಳು ಬೆಂಗಳೂರು, ಕೋಲಾರ ಮಾರ್ಗವಾಗಿ ಮಂಗಳೂರು ಕಡೆ ಹೋಗುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ತಂಡವು ಹಾಸನ ಜಿಲ್ಲೆಯ ಆಲೂರಿನ ಬಳಿ ಬಸ್ ತಪಾಸಣೆ ನಡೆಸಿ, ಆಲೂರು ಪೊಲೀಸ್ ಸಹಕಾರದೊಂದಿಗೆ ಮಕ್ಕಳನ್ನು ಪತ್ತೆಹಚ್ಚಿದ್ದಾರೆ. ಜೂ.15ರ ರಾತ್ರಿ ಮೂವರು ಮಕ್ಕಳನ್ನು ಲಿಂಗಸೂಗೂರಿಗೆ ಕರೆ ತರಲಾಗಿದ್ದು, ವಿಚಾರಣೆ ವೇಳೆ ಅವರು ಶಾಲೆ ಮತ್ತು ಓದಿಗೆ ಆಸಕ್ತಿ ಇಲ್ಲದ ಕಾರಣ ಮನೆಯವರಿಂದ ದೂರ ಹೋಗಿದ್ದಾಗಿ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿಗೆ ಜಿಲ್ಲಾ ಎಸ್.ಪಿ ಪುಟ್ಟಮಾದಯ್ಯ ಅವರು ಅಭಿನಂದನೆ ತಿಳಿಸಿದ್ದಾರೆ.