ರಾಯಚೂರು | ಜಿಲ್ಲಾ ಪಂಚಾಯತ್ ಆಡಳಿತ ಭವನದಲ್ಲಿ ಜಿಪಂ ಸಿಇಓ ಸಂಚಾರ : ಅಧಿಕಾರಿ, ಸಿಬ್ಬಂದಿ ಕಾರ್ಯವೈಖರಿ ಪರಿಶೀಲನೆ
ರಾಯಚೂರು : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ್ ಕಾಂದೂ ಅವರು ಕಾರ್ಯದೊತ್ತಡದ ನಡುವೆಯೂ ಅಕ್ಟೋಬರ್ 17ರಂದು ಜಿಲ್ಲಾ ಪಂಚಾಯತ್ ಆಡಳಿತ ಭವನದಲ್ಲಿನ ವಿವಿಧ ಶಾಖೆಗಳನ್ನು ಪರಿಶೀಲಿಸಿ, ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯನಿರ್ವಹಣೆಯನ್ನು ಅವಲೋಕಿಸಿದರು.
ಸಿಇಓ ಅವರು ಸ್ಟೋರ್ ರೂಂ, ಆಡಳಿತ ಶಾಖೆ, ಲೆಕ್ಕಪತ್ರ ಶಾಖೆ, ಎನ್‌ಆರ್‌ಎಲ್‌ಎಂ, ಸ್ವಚ್ಛ ಭಾರತ ಮಿಷನ್ ಯೋಜನೆಯ ಕಚೇರಿ ಸೇರಿದಂತೆ ಹಲವು ವಿಭಾಗಗಳಿಗೆ ಭೇಟಿ ನೀಡಿ, ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಸಿಬ್ಬಂದಿಯ ಕೆಲಸದ ಶಿಸ್ತು ಮತ್ತು ದಾಖಲೆ ನಿರ್ವಹಣೆಯ ಕುರಿತು ಸಲಹೆ ನೀಡಿದರು.
ಕಚೇರಿಯೊಳಗೆ ಯಾವುದೇ ಕಡತಗಳು ಅಸಮರ್ಪಕವಾಗಿ ಇರಬಾರದು. ಕಡತಗಳನ್ನು ಕ್ರಮಬದ್ಧವಾಗಿ ಜೋಡಿಸಿ, ಅಗತ್ಯ ಸಂದರ್ಭದಲ್ಲಿ ಸುಲಭವಾಗಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು. ಕಡತಗಳ ರಕ್ಷಣೆಯ ಕುರಿತು ಹೆಚ್ಚಿನ ಎಚ್ಚರ ವಹಿಸಲು ಅವರು ಸಲಹೆ ನೀಡಿದರು.
ಆವಕ–ಜಾವಕ ವಹಿಗಳ ನಿರ್ವಹಣೆ ಅತ್ಯಂತ ಪ್ರಮುಖವಾದ್ದರಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ಅದಕ್ಕೆ ಸೂಕ್ತ ಗಮನ ಕೊಡಬೇಕು. ಯಾವುದೇ ಶಾಖೆಯಲ್ಲಿ ಪತ್ರಗಳು ಅಥವಾ ಕಡತಗಳು ಎಲ್ಲೆಂದರಲ್ಲಿ ಬಿದ್ದಿರುವುದು ಕಂಡುಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪರಿಶೀಲನೆ ವೇಳೆ ಸಿಇಓ ಅವರು ಶಿಶುಪಾಲನಾ ಕೇಂದ್ರಕ್ಕೂ ಭೇಟಿ ನೀಡಿ, ಅಲ್ಲಿನ ಮಕ್ಕಳ ಯೋಗಕ್ಷೇಮ ಮತ್ತು ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ, ಮುಖ್ಯ ಯೋಜನಾಧಿಕಾರಿ ಡಾ. ಟಿ. ರೋಣಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಸೇರಿದಂತೆ ವಿವಿಧ ಯೋಜನೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.