ರಾಯಚೂರು | ಶಾಸಕ ಮಾನಪ್ಪ ವಜ್ಜಲ್ ಅವರು ನನ್ನ ಹಿಂದಿನ ಆರೆಸ್ಸೆಸ್ ಗಣವೇಶಧಾರಿಯ ಫೋಟೋ ಪ್ರದರ್ಶಿಸಿ ಸಣ್ಣತನ ಪ್ರದರ್ಶಿಸಿದ್ದಾರೆ : ಗೋವಿಂದ ನಾಯಕ
ರಾಯಚೂರು: ಶಾಸಕ ಮಾನಪ್ಪ ವಜ್ಜಲ್ ತಮ್ಮ ಆಪ್ತ ಪಿಡಿಒ ಪ್ರವೀಣ ಕುಮಾರ್ ರಕ್ಷಣೆ ಮಾಡುವ ಭರದಲ್ಲಿ ನನ್ನ ಹಿಂದಿನ ಆರೆಸ್ಸೆಸ್ ಗಣವೇಶಧಾರಿಯ ಫೋಟೋ ಪ್ರದರ್ಶಿಸಿ ಸಣ್ಣತನ ಪ್ರದರ್ಶಿಸಿದ್ದಾರೆ ಎಂದು ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಿಂಗಸುಗೂರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರನಾಗಿ ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗವಹಿಸುವುದು ನಿಯಮಬಾಹಿರ. ಸರ್ಕಾರವು ಪಿಡಿಒ ಪ್ರವೀಣ ಕುಮಾರ್ ಅವರನ್ನು ಅಮಾನತು ಮಾಡಿರುವುದು ಸರಿಯಾದ ಕ್ರಮ. ಆದರೆ ಶಾಸಕ ವಜ್ಜಲ್ ಅವರಿಗೆ ಅದು ಸಹಿಸಲಾಗದೆ ನನ್ನ ಹಳೆಯ ಫೋಟೋ ಮಾಧ್ಯಮಗಳಲ್ಲಿ ಹರಡಿಸಿದ್ದಾರೆ. ನಾನು ರಾಜಕಾರಣಿ, ಸರ್ಕಾರಿ ನೌಕರನಲ್ಲ ಎಂದು ಸ್ಪಷ್ಟಪಡಿಸಿದರು.
ಮಾನಪ್ಪ ವಜ್ಜಲ್ ಕಾಂಗ್ರೆಸ್‌ನಿಂದ ರಾಜಕೀಯ ಜೀವನ ಆರಂಭಿಸಿ ನಂತರ ಬಿಜೆಪಿ, ಜೆಡಿಎಸ್ ಸೇರಿ ಮತ್ತೆ ಬಿಜೆಪಿಗೆ ಹಿಂತಿರುಗಿದ್ದಾರೆ. ಅಧಿಕಾರದ ಆಸೆಯಿಂದ ಮುಂದೇನು ಮಾಡುತ್ತಾರೆ ಎಂಬುದು ಗೊತ್ತಿಲ್ಲ. ಪಕ್ಷದಲ್ಲಿ ಸಾಮಾಜಿಕ ಅಸಮಾನತೆ, ಅನ್ಯಾಯದ ವರ್ತನೆಗಳಿಂದ ಬೇಸತ್ತು ಕಾಂಗ್ರೆಸ್‌ಗೆ ಬಂದಿದ್ದೇನೆ. ಹಳೆಯ ಫೋಟೋ ತೋರಿಸಿ ಸುಳ್ಳು ಪ್ರಚಾರ ಮಾಡುವುದರಿಂದ ಏನೂ ಪ್ರಯೋಜನ ಇಲ್ಲ ಎಂದು ಅವರು ಹೇಳಿದರು.
ವಜ್ಜಲ್ ಅಭಿವೃದ್ಧಿಯನ್ನು ಮರೆತು ರಾಜಕೀಯ ಕಸರತ್ತುಗಳಲ್ಲಿ ತೊಡಗಿದ್ದಾರೆ. ಶಾಸಕರ ಒಡೆಯತ್ವದ ಗುತ್ತಿಗೆ ಸಂಸ್ಥೆ ಗುತ್ತಿಗೆದಾರರಿಗೆ ಹಣ ಪಾವತಿಸದೆ ಪ್ರತಿಭಟನೆ ಎದುರಿಸಬೇಕಾಯಿತು. ಇಂತಹವರಿಂದ ಅಭಿವೃದ್ಧಿ ನಿರೀಕ್ಷಿಸುವುದು ವ್ಯರ್ಥ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಅಧ್ಯಕ್ಷ ಅಮರೇಶ ಹಿರೆಹೆಸರೂರು, ಕಾಂಗ್ರೆಸ್ ಮುಖಂಡರು ಹೆಚ್. ಮುದುಕಪ್ಪ ವಕೀಲ, ಸಂಜೀವಪ್ಪ ಛಲವಾದಿ, ಸಂತೋಷ ಸೊಪ್ಪಿಮಠ, ಉಮೇಶ್ ಹುನಕುಂಟಿ, ನೀಲಪ್ಪ ಪವಾರ್ ಮತ್ತು ಜೀವನಕುಮಾರ ಉಪಸ್ಥಿತರಿದ್ದರು.