ರಾಯಚೂರು | 77ನೇ ಗಣರಾಜ್ಯೋತ್ಸವ: ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಧ್ವಜಾರೋಹಣ
ರಾಯಚೂರು: 77ನೇ ಗಣರಾಜ್ಯೋತ್ಸವದ ಅಂಗವಾಗಿ ರಾಯಚೂರಿನ ಜಿಲ್ಲಾ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಧ್ವಜಾರೋಹಣ ನಡೆಸಿದರು.
ಈ ಸಂದರ್ಭದಲ್ಲಿ ಎಂಎಲ್ ಸಿ ವಸಂತಕುಮಾರ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ಬಸನಗೌಡ ದದ್ದಲ್, ನಗರ ಶಾಸಕ ಡಾ. ಶಿವರಾಜ ಪಾಟೀಲ, ಜಿಲ್ಲಾಧಿಕಾರಿ ನಿತಿಶ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷುಗಿರಿ, ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ, ಜಿಲ್ಲಾ ಪಂಚಾಯತ್ ಸಿಇಒ ಈಶ್ವರ್ ಕುಮಾರ್ ಕಾಂದೂ, ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಪವನ್ ಕುಮಾರ್ ಪಾಟೀಲ ಕಿಶೋರ್, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಮತ್ತು ಡಾ. ರಝಾಕ್ ಉಸ್ತಾದ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
ವಿವಿಧ ಶಾಲಾ ಮತ್ತು ಕಾಲೇಜುಗಳ ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನವನ್ನು ವೀಕ್ಷಿಸಿದ ಬಳಿಕ ಸಚಿವರು ಗಣರಾಜ್ಯೋತ್ಸವ ಸಂದೇಶ ನೀಡಿದರು.
ಸತ್ಯ ಮತ್ತು ಅಹಿಂಸೆಯಿಂದ ಪಡೆದ ಸ್ವಾತಂತ್ರ್ಯವು ವಿಶ್ವಕ್ಕೆ ಮಾದರಿಯಾಗಿದೆ. ಸರ್ವರಿಗೂ ಸಮಾನತೆ ದೊರಕಬೇಕು ಎಂಬುದೇ ಸ್ವಾತಂತ್ರ್ಯ ಹೋರಾಟಗಾರರ ಮುಖ್ಯ ಗುರಿಯಾಗಿತ್ತು. ಬಾಬಾಸಾಹೇಬ್ ಅಂಬೇಡ್ಕರ್ ಜ್ಞಾನದ ಸಾಗರ, ಮೇಧಾವಿ, ದೇಶಕ್ಕೆ ಅಗತ್ಯವಾದ ಅದ್ಭುತ ಸಂವಿಧಾನ ಮತ್ತು ವಿಶ್ವಕ್ಕೆ ಮಾದರಿ ಸಂವಿಧಾನವನ್ನು ನಮಗೆ ನೀಡಿದ್ದಾರೆ ಎಂದರು.
ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ವಿವಿಧ ಭಾಷೆ, ಸಂಸ್ಕೃತಿ, ಅಭಿಪ್ರಾಯಗಳ ನಡುವಿನ ಏಕತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲರಿಗೂ ಅನ್ವಯವಾಗುವಂತೆ ಸಂವಿಧಾನವನ್ನು ರೂಪಿಸಲಾಗಿದೆ. ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಪ್ರತಿ ಶಬ್ದದ ಕುರಿತು ಚರ್ಚೆ ಮಾಡಿ, ತೀವ್ರ ಪರಿಶೀಲನೆ ನಡೆಸಿ ಒಪ್ಪಿಗೆ ನೀಡಿದ್ದರು. ಪ್ರತಿಯೊಬ್ಬರೂ ಸಂವಿಧಾನದ ಅಂಗೀಕಾರಕ್ಕಾಗಿ ತೀವ್ರವಾಗಿ ಚರ್ಚೆ ಮಾಡಿದ್ದಾರೆ. ಆದ್ದರಿಂದ ನಾವೆಲ್ಲರೂ ಈ ಸಂವಿಧಾನವನ್ನು ಅಂಗೀಕರಿಸಬೇಕು ಎಂದು ಸಚಿವರು ಅಭಿಪ್ರಾಯಪಟ್ಟರು.
ಸಂವಿಧಾನದ ಅಡಿಯಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದ್ದೇವೆ. ಸರ್ಕಾರವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಸಮಾನತೆ, ಒಕ್ಕೂಟ ವ್ಯವಸ್ಥೆ ಉಳಿಸಿಕೊಂಡು ಹೋಗಬೇಕು. ಕೇಂದ್ರ ಮತ್ತು ರಾಜ್ಯಗಳ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಮತ್ತು ನಿಷ್ಪಕ್ಷಪಾತ, ನಿಸ್ವಾರ್ಥ ಭಾವದಿಂದ ಕೆಲಸ ಮಾಡಬೇಕು ಎಂದರು.
2013 ರಲ್ಲಿ ಯುಪಿಎ ಸರ್ಕಾರವು ಸಂವಿಧಾನದಲ್ಲಿ ತಿದ್ದುಪಡಿ 371ಜೆ ಕಲಂ ಜಾರಿಗೆ ತಂದಿತು. ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಈ ಕ್ರಮ ಬಹಳ ಪರಿಣಾಮಕಾರಿಯಾಗಿದೆ. ಮಲ್ಲಿಕಾರ್ಜುನ ಖರ್ಗೆಯವರ ಶ್ರಮದ ಮೂಲಕ ಕಳೆದ 10 ವರ್ಷಗಳಲ್ಲಿ 1 ಲಕ್ಷ ಉದ್ಯೋಗ ಸೃಷ್ಟಿಯಾಗಿದ್ದು, ಸಾವಿರಾರು ಇಂಜಿನಿಯರ್‌ಗಳು ಹಿರಿತನ ತಲುಪಿದ್ದಾರೆ. ಗ್ಯಾರಂಟಿ ಯೋಜನೆಯ ಮೂಲಕ ಈ ಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ರಾಜ್ಯವನ್ನು ಸಮೃದ್ಧ, ಪ್ರಗತಿಪರವನ್ನಾಗಿಸಲು ಹಲವು ಯೋಜನೆಗಳನ್ನು ಯಶಸ್ವಿಯಾಗಿ ಪ್ರಾರಂಭಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 5,000 ಕೋಟಿ ಪ್ರತ್ಯೇಕ ಅನುದಾನ ನೀಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಬೇಡಿಕೆಗೆ ಸ್ಪಂದಿಸಿ ಕ್ರಮ ಕೈಗೊಳ್ಳಲಾಗಿದೆ. ಏಮ್ಸ್ ಸ್ಥಾಪನೆಗಾಗಿ ಪ್ರಯತ್ನಗಳು ನಡೆಯುತ್ತಿವೆ. ಪಾರದರ್ಶಕ ಆಡಳಿತಕ್ಕಾಗಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಮನರೇಗಾ ಕಾಯ್ದೆಯನ್ನು ಬದಲಾಯಿಸಿದ ಕೇಂದ್ರ ಸರ್ಕಾರ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ನೀಡಿದೆ. ಮನರೇಗಾ ಗ್ರಾಮೀಣ ಜನರಿಗೆ ಮತ್ತು ಭೂರಹಿತರಿಗೆ ಉದ್ಯೋಗ ಖಾತರಿ ನೀಡುತ್ತಿತ್ತು. ಜನರು ಕೆಲಸಕ್ಕಾಗಿ ಗ್ರಾಮ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದರೆ ಕೆಲಸ ದೊರಕುತ್ತಿತ್ತು; ಇಲ್ಲದಿದ್ದರೆ ನಿರುದ್ಯೋಗ ಭತ್ಯೆ ದೊರಕುತ್ತಿತ್ತು. ಆದರೆ ಕೇಂದ್ರ ಸರ್ಕಾರವು ರಾಜ್ಯಗಳ ಅಭಿಪ್ರಾಯವನ್ನು ಕೇಳದೆ ಗಣತಂತ್ರಕ್ಕೆ ವಿರುದ್ಧವಾದ ನೀತಿಗಳನ್ನು ಅನುಸರಿಸಿದೆ. ಬಡವರ ಹಕ್ಕು ಕಸಿದುಕೊಳ್ಳಲು ಯಾರಿಗೂ ಅಧಿಕಾರವಿಲ್ಲ. ಮನರೇಗಾ ಪುನಃ ಜಾರಿಗೆ ಬರಬೇಕು ಎಂದು ಹೇಳಿದರು.
ಸಂವಿಧಾನಕ್ಕಿಂತ ದೊಡ್ಡವರು ಯಾರೂ ಇಲ್ಲ; ದೇಶ ಕಟ್ಟಲು ಕೇಂದ್ರ-ರಾಜ್ಯ ಸರ್ಕಾರಗಳು ನಿಸ್ವಾರ್ಥವಾಗಿ ಕಾರ್ಯನಿರ್ವಹಿಸಬೇಕು. ಪ್ರಜೆಗಳಾದ ನಾವೆಲ್ಲಾ ದೇಶಭಕ್ತಿ ಅಳವಡಿಸಿಕೊಳ್ಳಬೇಕು. ಎಲ್ಲರನ್ನೂ ಸಮಾನವಾಗಿ ಕಾಣಬೇಕು, ಗೌರವಿಸಬೇಕು ಎಂದರು.