×
Ad

ರಾಯಚೂರು | ಕೋಟ್ಯಾಂತರ ರೂ. ಖರ್ಚಾದರೂ ಕುಡಿಯುವ ನೀರಿನ ಯೋಜನೆ ಅಪೂರ್ಣ: ಭೀಮರಾಯಸ್ವಾಮಿ ಆರೋಪ

Update: 2026-01-25 22:15 IST

ರಾಯಚೂರು: ಸಿರವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿ ಕೋಟಿ ಕೋಟಿ ರೂ. ಅನುದಾನ ಮಂಜೂರಾಗಿದ್ದರೂ ಕುಡಿಯುವ ನೀರಿನ ಯೋಜನೆ ಇದುವರೆಗೂ ಪೂರ್ಣಗೊಂಡಿಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಉದ್ದೇಶಪೂರ್ವಕವಾಗಿ ಯೋಜನೆ ಜಾರಿಯಾಗದಂತೆ ತಡೆಯುತ್ತಿದ್ದಾರೆ ಎಂದು ಅತ್ತನೂರು ಕುಡಿಯುವ ನೀರು ಹೋರಾಟ ಸಮಿತಿಯ ಅಧ್ಯಕ್ಷ ಭೀಮರಾಯಸ್ವಾಮಿ ಆರೋಪಿಸಿದರು.

ಅವರು ಮಂಗಳವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, 2009–10ನೇ ಸಾಲಿನಲ್ಲಿ ರಾಜೀವ್ ಗಾಂಧಿ ಮಿಷನ್ ಯೋಜನೆಯಡಿ ಗ್ರಾಮಕ್ಕೆ 9 ಕೋಟಿ 53 ಲಕ್ಷ ರೂ. ಅನುದಾನ ಮಂಜೂರಾಗಿತ್ತು. 11 ತಿಂಗಳೊಳಗೆ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಮಧ್ಯದಲ್ಲೇ ಸ್ಥಗಿತಗೊಂಡಿತು ಎಂದು ಹೇಳಿದರು.

ಯೋಜನೆ ಮಂಜೂರಾದ ಎಂಟು ವರ್ಷಗಳ ನಂತರ 2018ರಲ್ಲಿ ಮಾತ್ರ ಕೆರೆ ಜಾಗ ನೋಂದಣಿ ನಡೆದಿದ್ದು, ತಜ್ಞರ ಸಮಿತಿ ಸ್ಥಳ ಪರಿಶೀಲನೆ ನಡೆಸಿ ಸ್ಥಳ ಬದಲಾವಣೆ ಮಾಡಿದ ಬಳಿಕ 2020ರಲ್ಲಿ ಕಾಮಗಾರಿ ಸಂಪೂರ್ಣ ಸ್ಥಗಿತಗೊಂಡಿತು. ಮರು ಟೆಂಡರ್ ಕರೆಯದೇ ಜಿಲ್ಲಾ ಪಂಚಾಯತ್ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದರಿಂದ ಯೋಜನೆ ಮುಂದುವರಿಯಲಿಲ್ಲ ಎಂದು ದೂರಿದರು.

ಅದೇ ಕುಡಿಯುವ ನೀರಿನ ಯೋಜನೆಗೆ ಜಲ ಜೀವನ ಮಿಷನ್ ಯೋಜನೆಯಡಿ ಮತ್ತೆ 1 ಕೋಟಿ 30 ಲಕ್ಷ ರೂ. ಅನುದಾನ ಮಂಜೂರಾದರೂ, ಗ್ರಾಮಸ್ಥರಿಗೆ ಇನ್ನೂ ಕುಡಿಯುವ ನೀರು ದೊರಕಿಲ್ಲ. ಗ್ರಾಮಕ್ಕೆ ಸೇರಿದ 17 ಎಕರೆ 17 ಗುಂಟೆ ಕೆರೆ ಜಾಗದಲ್ಲಿ ಕಾಮಗಾರಿ ನಡೆಯದೇ ಇರುವುದರಿಂದ ಅಕ್ರಮ ಮರಳು ದಂಧೆ ಆರಂಭವಾಗಿದೆ. ಇದನ್ನು ತಡೆಯಲು ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಕ್ಷೇತ್ರದ ಶಾಸಕರು, ಅಧಿಕಾರಿಗಳು ಹಾಗೂ ಉಸ್ತುವಾರಿ ಸಚಿವರು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ, ಗ್ರಾಮಸ್ಥರು ರಸ್ತೆಯಲ್ಲೇ ನೀರು ಹೊತ್ತುಕೊಂಡು ಹೋಗುವ ಸ್ಥಿತಿ ಇದ್ದರೂ ಯಾರಿಗೂ ಕರುಣೆ ಕಾಣಿಸುತ್ತಿಲ್ಲ. ಗ್ರಾಮದಲ್ಲಿ ನೀರಿನ ಬವಣೆ ತೀವ್ರವಾಗಿದೆ ಎಂದು ಹೇಳಿದರು.

ಕುಡಿಯುವ ನೀರಿನ ಅಕ್ರಮಗಳ ಕುರಿತು ವಿಧಾನ ಪರಿಷತ್ ಸದಸ್ಯ ಶಶಿಲ್ ನಮೋಶಿ ಅವರು ಸದನದಲ್ಲಿ ಪ್ರಶ್ನೆ ಎತ್ತಿದ್ದು,  ಗ್ರಾಮೀಣಾಭಿವೃದ್ಧಿ ಸಚಿವರು 2025ರ ಡಿಸೆಂಬರ್ ವೇಳೆಗೆ ಜಲ ಜೀವನ ಮಿಷನ್ ಕಾಮಗಾರಿ ಪೂರ್ಣಗೊಳಿಸಿ ಮನೆಮನೆಗೆ ನೀರು ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಅವಧಿ ಮುಗಿದರೂ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್ ಹಾಗೂ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಇಲಾಖಾ ಸಚಿವರಿಗೆ ತಪ್ಪು ಮಾಹಿತಿ ನೀಡಿ ದಾರಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಉಸ್ತುವಾರಿ ಸಚಿವರು ಯೋಜನೆಯನ್ನು ತನಿಖೆಗೆ ಒಳಪಡಿಸಿ, ಯೋಜನೆ ಜಾರಿಗೆ ಅಡ್ಡಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಬೇಸಿಗೆ ಆರಂಭಕ್ಕೂ ಮುನ್ನ ನೀರಿನ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ಸಮಿತಿಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಹನುಂತ್ರಾಯ ಗಚ್ಚಿನಮನೆ, ಬಸವಂತ ಪಾಟೀಲ್ (ವಕೀಲ), ಬಸವರಾಜ ನಾಯಕ (ಅತ್ತನೂರು), ಶಿವುಪುತ್ರ ನಾಯಕ, ಹಮೀದ ಪಾಷಾ, ಇರ್ಫಾನ್ ಅತ್ತನೂರು, ಅಮರೇಶ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News