×
Ad

ರಾಯಚೂರು | ಪಡಿತರ ಅಕ್ಕಿ ಅಕ್ರಮ ಸಾಗಾಟ : 13 ಕ್ವಿಂಟಾಲ್ ಅಕ್ಕಿ ವಶಕ್ಕೆ

Update: 2026-01-25 22:07 IST

ರಾಯಚೂರು: ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಣೆ ಮಾಡುತ್ತಿದ್ದ ವೇಳೆ ಶಕ್ತಿನಗರ ಪೊಲೀಸರು ದಾಳಿ ನಡೆಸಿ 13 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ಸಹಿತ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನಿಂದ ಗದ್ವಾಲ್ ಕಡೆಗೆ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ, ವಡ್ಲೂರು ಕ್ರಾಸ್ ಸಮೀಪ ಶಕ್ತಿನಗರ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಕೆಎ-33 ಎಫ್-3843 ಸಂಖ್ಯೆಯ ಲಾರಿಯನ್ನು ತಡೆದು ಪರಿಶೀಲನೆ ನಡೆಸಿದಾಗ ಅನ್ನಭಾಗ್ಯ ಅಕ್ಕಿ ಸಾಗಣೆ ಪತ್ತೆಯಾಗಿದೆ.

ವಶಪಡಿಸಿಕೊಂಡ ಲಾರಿ ವಡಗೇರಾ ಮೂಲದ ಮುಹಮ್ಮದ್‌ ಹಜರತ್ ಅಲಿ, ಮಹೆಬೂಬು ಹಾಗೂ ಸೋಹೆಲ್ ಎಂಬುವರಿಗೆ ಸೇರಿದ್ದಾಗಿ ತಿಳಿದು ಬಂದಿದೆ. ಮಾಹಿತಿ ಪಡೆದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರೀಕ್ಷಕರು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಲಾರಿಯಲ್ಲಿ ಸಾಗಿಸಲಾಗುತ್ತಿದ್ದದ್ದು ಸರ್ಕಾರದ ಅನ್ನಭಾಗ್ಯ ಅಕ್ಕಿಯೇ ಎಂಬುದನ್ನು ಖಚಿತಪಡಿಸಿದ್ದಾರೆ.

ಈ ದಾಳಿಯಲ್ಲಿ ಶಕ್ತಿನಗರ ಪೊಲೀಸ್ ಠಾಣೆ ಪಿಎಸ್‌ಐ ನಾರಾಯಣ ಹಾಗೂ ಸಿಬ್ಬಂದಿಗಳು ಭಾಗವಹಿಸಿ ಲಾರಿ ಮತ್ತು ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.

ಸರ್ಕಾರ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ತಲಾ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದರೂ, ಈ ಅಕ್ಕಿ ಬಡವರಿಗೆ ತಲುಪದೇ ಉಳ್ಳವರ ಕೈ ಸೇರಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ. ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ತೆಲಂಗಾಣ ರಾಜ್ಯಕ್ಕೆ ಸಾಗಿಸಲಾಗುತ್ತಿರುವುದು ದಾಳಿಯಿಂದ ಬೆಳಕಿಗೆ ಬಂದಿದೆ.

ಇದಕ್ಕೂ ಕೆಲ ದಿನಗಳ ಹಿಂದಷ್ಟೇ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ನಲ್ಲಿ ಅಕ್ರಮ ಅಕ್ಕಿ ಸಾಗಾಣೆ ಜಾಲ ಪತ್ತೆಯಾಗಿತ್ತು. ಪ್ರಕರಣ ಇನ್ನೂ ತನಿಖೆ ಹಂತದಲ್ಲಿದ್ದರೂ, ಮತ್ತೆ ಮತ್ತೆ ಅಕ್ರಮ ಸಾಗಣೆ ನಡೆಯುತ್ತಿರುವುದು ಆತಂಕಕಾರಿಯಾಗಿದೆ. ಯಾದಗಿರಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅನ್ನಭಾಗ್ಯ ಅಕ್ಕಿ ಕಳ್ಳ ಸಾಗಣೆ ಮುಂದುವರೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.









Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News