ಕರ್ತವ್ಯ ಲೋಪವೆಸಗುವ ಅಧಿಕಾರಿಗಳ ಅಮಾನತಿಗೆ ಶಿಫಾರಸು : ಶಾಸಕಿ ಕರೆಮ್ಮ ಜಿ.ನಾಯಕ
"ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಿ"
ದೇವದುರ್ಗ: ಬೇಸಿಗೆ ಆರಂಭವಾಗುತ್ತಿದ್ದು, ದೇವದುರ್ಗ ಹಾಗೂ ಅರಕೇರಾ ತಾಲೂಕಿನ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಗ್ರಾಪಂ ಅಧಿಕಾರಿಗಳು ಎಚ್ಚರವಹಿಸಬೇಕು. ಆತ್ಮವಿಶ್ವಾಸ ಮತ್ತು ಜನಸೇವೆಯ ಮನೋಭಾವದಿಂದ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಿ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ದೇವದುರ್ಗ ಮತ್ತು ಅರಕೇರಾ ತಾಲೂಕು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಒಂದು ಹಳ್ಳಿಯ ಸಮಸ್ಯೆಯನ್ನು ಎರಡೂ ಮೂರು ಬಾರಿ ಹೇಳಿದರೂ ಕೆಲಸವಾಗುತ್ತಿಲ್ಲ. ಕೊತ್ತದೊಡ್ಡಿ ಗ್ರಾಮದಲ್ಲಿ ಸ್ವಂತ ಹಣದಲ್ಲಿ ಕೊರೆಸಿದ ಮೂರು ಬೋರ್‌ವೆಲ್‌ಗಳಿಗೆ ಮೋಟಾರ್ ಅಳವಡಿಸಲು ವರ್ಷಗಳ ಕಾಲ ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದು ಪಿಡಿಒ ಲಿಂಗಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮಂತಹ ಬೇಜವಾಬ್ದಾರಿ ಅಧಿಕಾರಿಗಳಿಂದ ಸರ್ಕಾರಕ್ಕೆ ಹಾಗೂ ಶಾಸಕರಿಗೆ ಕೆಟ್ಟ ಹೆಸರು ಬರುತ್ತಿದೆ. ಇದೇ ವರ್ತನೆ ಮುಂದುವರಿದರೆ ಅಮಾನತಿಗೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿವಿಧ ವಸತಿ ಯೋಜನೆಯಡಿ ಮನೆಗಳು ಮಂಜೂರಾಗಿದ್ದರೂ ಲಾಗಿನ್ ಬ್ಲಾಕ್ ಮಾಡಿ ಫಲಾನುಭವಿಗಳನ್ನು ಅಲೆದಾಡಿಸುತ್ತಿರುವ ಬಗ್ಗೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಹಣ ಕೊಟ್ಟವರಿಗೆ ಮಾತ್ರ ಜಿಪಿಎಸ್ ಮಾಡುವ ಪದ್ಧತಿಯನ್ನು ಮೊದಲು ಕೈಬಿಡಿ. ಅರ್ಹ ಫಲಾನುಭವಿಗಳಿಗೆ ತೊಂದರೆ ನೀಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ತಾಲೂಕಿನ ಸುಮಾರು 50 ಶುದ್ಧ ಕುಡಿಯುವ ನೀರಿನ ಘಟಕಗಳು ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿರುವುದನ್ನು ಗಮನಿಸಿದ ಶಾಸಕರು, ಕೂಡಲೇ ಅವುಗಳನ್ನು ದುರಸ್ತಿ ಮಾಡುವಂತೆ ಎಇಇ ಹೀರಲಾಲ್ ಅವರಿಗೆ ಸೂಚಿಸಿದರು. ಅಲ್ಲದೆ, ರಾಮದುರ್ಗ, ಮೂಷ್ಟೂರು, ಅಮರಾಪುರ ಕೆರೆಗಳ ನಿರ್ವಹಣೆಗೆ ಅನುದಾನ ಬಳಕೆಯಾಗುತ್ತಿದ್ದರೂ ನೀರು ಪೂರೈಕೆಯಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿದರು.
ಈ ಕುರಿತು ಅಧಿಕಾರಿಗಳ ತಂಡ ರಚಿಸಿ ಪ್ರತ್ಯೇಕ ಸಭೆ ಕರೆಯಲು ತಾಪಂ ಇಒ ಬಸವರಾಜ ಹಟ್ಟಿ ಅವರಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ತಾಪಂ ಇಒ ಬಸವರಾಜ ಹಟ್ಟಿ, ಅರಕೇರಾ ತಾಪಂ ಇಒ ಅಣ್ಣರಾವ್, ಎಡಿ ಮಹೇಶ್ವರಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.