×
Ad

ಸಮಾಜದ ಕಷ್ಟಕ್ಕೆ ಮಿಡಿಯುವ ಅಕ್ಬರ್ ಪಾಷಾ ಅವರ ಕಾರ್ಯ ಶ್ಲಾಘನೀಯ : ಸಚಿವ ಎನ್.ಎಸ್.ಬೋಸರಾಜು

ದಾರುಸ್ಸಲಾಮ್ ಫೌಂಡೇಶನ್ ವತಿಯಿಂದ 121 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ

Update: 2026-01-18 20:09 IST

ರಾಯಚೂರು : ಅಕ್ಬರ್ ಪಾಷಾ ಅವರೊಟ್ಟಿಗೆ ಅನೇಕ ವರ್ಷಗಳಿಂದ ಸ್ನೇಹ, ಸಂಪರ್ಕ ಇದೆ. ಅವರು ಅನೇಕ ಸಮಾಜಿಕ ಕೆಲಸ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಬಡವರಿಗಾಗಿ ಆರೋಗ್ಯ ತಪಾಸಣೆ ಶಿಬಿರ, ಪಿಂಚಣಿ ಯೋಜನೆ ಸೇರಿದಂತೆ ಅನೇಕರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಸಮಾಜದ ಕಷ್ಟಕ್ಕೆ ಮಿಡಿಯುವ ಅಕ್ಬರ್ ಪಾಷಾ ಅವರ ಕಾರ್ಯ ಶ್ಲಾಘನೀಯ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ಮಾನ್ವಿಯ ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ದಾರುಸ್ಸಲಾಮ್ ಫೌಂಡೇಶನ್ ಅಧ್ಯಕ್ಷ ಸೈಯದ್ ಅಕ್ಬರ್ ಹುಸೇನಿ (ಅಕ್ಬರ್ ಪಾಷಾ) ಅವರು ತಮ್ಮ ಪುತ್ರನ ಮದುವೆ ಅಂಗವಾಗಿ ಮಾನ್ವಿ ಪಟ್ಟಣದ ಅಕ್ಬರಿಯ ಮಸೀದಿ ಬಳಿ ಆಯೋಜಿಸಿದ್ದ ಮುಸ್ಲಿಂ ಸಮುದಾಯದ 121 ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮೂಹಿಕ‌ ವಿವಾಹ ಕಾರ್ಯಕ್ರಮಕ್ಕೆ ಅಕ್ಬರ್ ಸಾಬ್‌ ಅವರು ಕಳೆದೊಂದು ತಿಂಗಳಿನಿಂದ ಪ್ರಯತ್ನ ಮಾಡಿದ್ದಾರೆ. ವಧು-ವರರಿಗೆ ಯಾವುದೇ ತೊಂದರೆಯಾಗದಂತೆ ಸಾಮೂಹಿಕ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. 1 ಕೋಟಿ ರೂ. ವೆಚ್ಚದಲ್ಲಿ ಮಾನ್ವಿಯಲ್ಲಿ ಅಲ್ಪಸಂಖ್ಯಾತರಿಗೆ ಶಾದಿಮಹಲ್ ನಿರ್ಮಿಸಲಾಗಿದೆ. ಸಮುದಾಯದ ಅಭಿವೃದ್ಧಿಗೆ ಸದಾ ಸಹಕಾರ ನೀಡುವೆ ಎಂದರು.

ಶಾಸಕ ಹಂಪಯ್ಯ ಸಾಹುಕಾರ ಮಾತನಾಡಿ, ಹಣವನ್ನು ಗಳಿಸುವುದು ಮುಖ್ಯವಲ್ಲ, ಆ ಹಣವನ್ನು ಯಾವ ರೀತಿ ಖರ್ಚು ಮಾಡುತ್ತೇವೆ ಎಂಬುದು ಮುಖ್ಯ. ಅಕ್ಬರ್ ಪಾಷಾ ಅವರು 120 ಸಾಮೂಹಿಕ ವಿವಾಹ ಮಾಡುವ ಮೂಲಕ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಹೇಳಿದರು.

ಸಾಮೂಹಿಕ ವಿವಾಹಗಳು ಬಡವರಿಗೆ ವರದಾನವಾಗಲಿದೆ. ಯಾಕೆಂದರೆ ಇಂದಿನ ದುಬಾರಿ ಯುಗದಲ್ಲಿ ಬಡವರು ಮದುವೆ ಮಾಡಲು ಲಕ್ಷಾಂತರ ರೂಪಾಯಿ ಸಾಲ ಮಾಡಿ ಮದುವೆ ಮಾಡಬೇಕಾದ ಪರಿಸ್ಥಿತಿ ಇದೆ. ಇಂತಹ ಕಾರ್ಯಕ್ರಮಗಳಿಂದ ಬಡವರ ಹೊರೆ ಕಡಿಮೆಯಾಗುತ್ತದೆ. ಬಡವರ ಕೋರಿಕೆ ಹಾಗೂ ದೇವರ ದಯೆಯಿಂದ ಮಾತ್ರ ಇಂತಹ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯ ಎಂದು ಹೇಳಿದರು.

ಶಾಂತಿ ಪ್ರಕಾಶನ ವ್ಯವಸ್ಥಾಪಕ ವಾಗ್ಮಿ ಮುಹಮ್ಮದ್ ಕುಂಞಿ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಮಾನ್ವಿ ಶಾಸಕ ಹಂಪಯ್ಯ ನಾಯಕ ಸಾಹುಕಾರ, ವಿಧಾನ ಪರಿಷತ್ ಸದಸ್ಯ ಎ.ವಸಂತ ಕುಮಾರ, ಮಾನ್ವಿಯ ಸಜ್ಜಾದ್ ಹುಸೇನ್ ಮುತವಾಲೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ರಾಷ್ಟ್ರೀಯ ಉಪಾಧ್ಯಕ್ಷ ಸೈಯ್ಯದ್ ವಲಿಯುಲ್ಲಾಹ್ ಸಯೀದಿ ಫಲಾಹಿ ಅಧ್ಯಕ್ಷತೆ ವಹಿಸಿದ್ದರು. ಸಭಾಧ್ಯಕ್ಷ ಯು.ಟಿ.ಖಾದರ್, ಸಚಿವ ಸತೀಶ್ ಜಾರಕಿಹೊಳಿ, ಸ್ಥಳೀಯ ಧರ್ಮ ಗುರುಗಳಾದ ಮೌಲಾನಾ ಮುಫ್ತಿ ಸೈಯದ್ ಹಸನ್ ಜಿಶಾನ್ ಖಾದ್ರಿ, ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ, ಬಿ.ವಿ.ನಾಯಕ, ಬಸನಗೌಡ ಬ್ಯಾಗವಾಟ, ಗಂಗಾಧರ ನಾಯಕ, ಬಶೀರುದ್ದೀನ್, ಕೆ.ಅಸ್ಲಂ ಪಾಷಾ, ಪ್ರತಾಪಗೌಡ, ಹಸನ್ ಸಾಬ ದೋಟಿಹಾಳ, ಕೆಪಿಸಿಸಿ ಮಾಧ್ಯಮ ವಕ್ತಾರ ಡಾ.ರಝಾಕ್ ಉಸ್ತಾದ್, ಮೌಲಾನಾ ಫರೀದ್ ಖಾನ್ ಉಪಸ್ಥಿತರಿದ್ದರು.

ಎಂ.ಎಚ್.ಮುಖೀಮ್ ಸ್ವಾಗತಿಸಿದರು. ಜೀಶಾನಿ ಅಖಿಲ್ ಸಿದ್ದೀಕಿ ನಿರೂಪಿಸಿದರು.

ವಿವಿಧ ಊರು ಹಳ್ಳಿಗಳಿಂದ ಮದುವೆಗೆ ಬಂದಿದ್ದ ಜನರನ್ನು ಪಟ್ಟಣದ ವಿವಿಧ ಶಾಲಾ-ಕಾಲೇಜುಗಳಲ್ಲಿ ಉಳಿದು ಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 7 ಸಾವಿರಕ್ಕೂ ಹೆಚ್ಚು ಜನರಿಗೆ ಬೆಳ್ಳಗಿನ ಉಪಹಾರದ, ಊಟದ ವ್ಯವಸ್ಥೆ ಮಾಡಲಾಗಿತ್ತು.

ಈ ಸಾಮೂಹಿಕ ಮದುವೆಗಳ ಕಾರ್ಯಕ್ರಮದಲ್ಲಿ ಮದುವೆಯಾದ ದಂಪತಿಗಳಿಗೆ ಬಟ್ಟೆ, ಮಂಚ, ಅಲ್ಮಾರಿ, ಪಾತ್ರೆಗಳು ಸೇರಿದಂತೆ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡಲಾಗಿದೆ. ಜೊತೆಗೆ ಸಾಮೂಹಿಕ ಮದುವೆಯಾದರೆ ದಂಪತಿಗೆ ನೀಡಲಾಗುತ್ತಿರುವ 50 ಸಾವಿರದ ಸಹಾಯ ಧನದ ಸೌಲಭ್ಯವನ್ನು ಸಹ ಒದಗಿಸಲಾಗಿದೆ.

ನಾನು ಸರಳ ಸಾಮೂಹಿಕ ವಿವಾಹ ಆಯೋಜಿಸಿರುವುದು ಒಬ್ಬ ನಾಯಕನಾಗಿ ಅಲ್ಲ, ನಿಮ್ಮ ಮನೆಯ ಅಣ್ಣ-ತಮ್ಮನಾಗಿ. ನಿಮ್ಮ ಕುಟುಂಬದ ಸದಸ್ಯನಂತೆ ನಿಮ್ಮೆಲ್ಲರ ಏಳಿಗೆಗಾಗಿ ಶ್ರಮಿಸುವುದು ನನ್ನ ಕರ್ತವ್ಯ. ದುಂದುವೆಚ್ಚ ಮಾಡದೇ ಸಮಾಜದಲ್ಲಿ ಮಕ್ಕಳನ್ನು ಶೈಕ್ಷಣಿಕವಾಗಿ ಮುಂದೆ ತರಬೇಕು. ದೇವರು ಕೊಟ್ಟ ಆರೋಗ್ಯ, ಸಂಪತ್ತು, ಬುದ್ಧಿವಂತಿಕೆ ಸಮಾಜಕ್ಕೆ ವಿನಿಯೋಗವಾಗಬೇಕು. ಸಮಾಜ ನೀಡಿದ್ದು ಸಮಾಜಕ್ಕೆ ಕೊಡಲಾರದೇ ಇರುವವರು ಇದ್ದರೂ ವ್ಯರ್ಥ. ಹೀಗಾಗಿ ಅಲ್ಪಸ್ವಲ್ಪ ಸಾಮಾಜಿಕ ಕೆಲಸ‌ಮಾಡುತ್ತಿದ್ದೇನೆ‌. ಏನಾದರು ಲೋಪದೋಷಗಳು ಅಗಿದ್ದಲ್ಲಿ ಕ್ಷಮೆ ಇರಲಿ.

-ಸೈಯದ್ ಅಕ್ಬರ್ ಹುಸೇನಿ (ಅಕ್ಬರ್ ಪಾಷಾ), ದಾರುಸ್ಸಲಾಮ್ ಫೌಂಡೇಶನ್ ಅಧ್ಯಕ್ಷ

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News