ಆರ್ಥಿಕವಾಗಿ ಸಬಲರಾಗಿರುವವರು ಬಡವರ ನೆರವಿಗೆ ಧಾವಿಸುವುದು ಸಾಮಾಜಿಕ ಜವಾಬ್ದಾರಿ : ಸಚಿವ ಸತೀಶ್ ಜಾರಕಿಹೊಳಿ
► "ಅಕ್ಬರ್ ಪಾಷಾ ಅವರಿಂದ ಪ್ರತಿ ವರ್ಷ ಸಾಮೂಹಿಕ ವಿವಾಹ ನಡೆಯಲಿ" ► ದಾರುಸ್ಸಲಾಮ್ ಫೌಂಡೇಶನ್ ವತಿಯಿಂದ 121 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ
ರಾಯಚೂರು : ಆರ್ಥಿಕವಾಗಿ ಸಬಲರಾಗಿರುವವರು ಬಡವರ ನೆರವಿಗೆ ಧಾವಿಸುವುದು ಸಾಮಾಜಿಕ ಜವಾಬ್ದಾರಿಯಾಗಿದೆ. ಅಕ್ಬರ್ ಪಾಷಾ ಅವರು ತಮ್ಮ ಪುತ್ರನ ಮದುವೆಯ ಸಂದರ್ಭದಲ್ಲಿ 121 ಜೋಡಿಗಳಿಗೆ ಉಚಿತವಾಗಿ ಸಾಮೂಹಿಕ ವಿವಾಹ ಆಯೋಜಿಸುವ ಮೂಲಕ ರಾಜ್ಯಕ್ಕೆ ಆದರ್ಶಪ್ರಾಯವಾಗಿದ್ದಾರೆ. ಅಕ್ಬರ್ ಪಾಷಾ ಅವರಿಂದ ಪ್ರತಿ ವರ್ಷ ಸಾಮೂಹಿಕ ವಿವಾಹ ನಡೆಯಲಿ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಮಾನ್ವಿಯ ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ದಾರುಸ್ಸಲಾಮ್ ಫೌಂಡೇಶನ್ ಅಧ್ಯಕ್ಷ ಸೈಯದ್ ಅಕ್ಬರ್ ಹುಸೇನಿ (ಅಕ್ಬರ್ ಪಾಷಾ) ಅವರು ತಮ್ಮ ಪುತ್ರನ ಮದುವೆ ಅಂಗವಾಗಿ ಮಾನ್ವಿ ಪಟ್ಟಣದ ಅಕ್ಬರಿಯ ಮಸೀದಿ ಬಳಿ ಆಯೋಜಿಸಿದ್ದ ಮುಸ್ಲಿಂ ಸಮುದಾಯದ 121 ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜವನ್ನು ಹಣದಿಂದ ಬದಲಾಯಿಸಲು ಸಾಧ್ಯವಿಲ್ಲ. ಒಳ್ಳೆಯ ವಿಚಾರಗಳ ಮೂಲಕ ಬದಲಾಯಿಸಬೇಕು. ಇದಕ್ಕೆ ಈ ಕಾರ್ಯಕ್ರಮ ಪೂರಕವಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ನಮ್ಮ ಸರ್ಕಾರದ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಅನೇಕ ಯೋಜನೆಗಳ ಮೂಲಕ ನೆರವಾಗುತ್ತಿದೆ. ಅಲ್ಪಸಂಖ್ಯಾತರ ಪರವಾಗಿ ನಮ್ಮ ಸರ್ಕಾರ ಸದಾ ಇರುತ್ತದೆ ಎಂದರು.
ಇಂದಿನ ಕಾಲದಲ್ಲಿ ದುಂದುವೆಚ್ಚದ ಮದುವೆಗಳು ಹೆಚ್ಚಾಗುತ್ತಿದ್ದು, ಸರಳ ವಿವಾಹಗಳ ಸಂಖ್ಯೆ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ 121 ಜೋಡಿಗಳ ಮದುವೆ ಮಾಡಿಸಿರುವ ಅಕ್ಬರ್ ಪಾಷಾ ಅವರು ರಾಜ್ಯಕ್ಕೆ ಹೊಸ ಸಂದೇಶ ಕೊಟ್ಟಿದ್ದಾರೆ. ನೂತನ ವಧು-ವರರು 'ನಾವಿಬ್ಬರು ನಮಗಿಬ್ಬರು' ಎಂಬ ಧ್ಯೇಯದೊಂದಿಗೆ ಕುಟುಂಬ ಯೋಜನೆಯನ್ನು ಅಳವಡಿಸಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.
ಮಾಜಿ ಸಚಿವ ಕೆ.ಶಿವನಗೌಡ ನಾಯಕ ಮಾತನಾಡಿ, ನಾನು ಈ ಹಿಂದೆ ಸಾಮೂಹಿಕ ವಿವಾಹ ಮಾಡಿಸಿದ್ದೆ. ಆದರೆ, 11ಜೋಡಿಗಳನ್ನು ವಿವಾಹ ಮಾಡಿಸಲು ಹೆಣಗಾಡಿದ್ದೇನೆ. ಅಕ್ಬರ್ ಪಾಷಾ ಅವರು 121 ಜೋಡಿಗಳ ವಿವಾಹ ಮಾಡಿಸಿದ್ದು ದಾಖಲೆಯಾಗಿದೆ. ಅಕ್ಬರ್ ಪಾಷಾ ಅವರು ತಮ್ಮ ಸಂಪಾದನೆಯಲ್ಲಿ ಶೇ. 90ರಷ್ಟು ಹಣವನ್ನು ಬಡವರಿಗಾಗಿಯೇ ವ್ಯಯಿಸುವ ಅಪರೂಪದ ವ್ಯಕ್ತಿ. ಸರ್ಕಾರದಿಂದಲೇ ಪಿಂಚಣಿ ನೀಡಲು ವಿಳಂಬವಾಗುವ ಈ ಕಾಲದಲ್ಲಿ, ಪ್ರತಿ ತಿಂಗಳ 1ನೇ ತಾರೀಖಿನಂದು ನೂರಾರು ನಿರ್ಗತಿಕರಿಗೆ ಸ್ವಂತ ಹಣದಿಂದ ಪಿಂಚಣಿ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕೋವಿಡ್ ಸಂದರ್ಭದಲ್ಲಿ ಉಚಿತ ಆಂಬುಲೆನ್ಸ್ ಸೇವೆ, ರಮಝಾನ್ ವೇಳೆ ಮಸೀದಿಗಳಿಗೆ ಏರ್ ಕೂಲರ್‌ಗಳ ವಿತರಣೆ ಸೇರಿದಂತೆ ಅನೇಕ ಕೆಲಸಗಳನ್ನು ಅಕ್ಬರ್ ಪಾಷಾ ಅವರು ಯಾವುದೇ ಪ್ರಚಾರ ಬಯಸದೆ ಮಾಡಿದ್ದಾರೆ. ಬಲಗೈ ನೀಡಿದ ದಾನ ಎಡಗೈಗೆ ತಿಳಿಯಬಾರದು ಎಂಬ ಸಂಪ್ರದಾಯವನ್ನು ಇವರು ಅಕ್ಷರಶಃ ಪಾಲಿಸುತ್ತಿದ್ದಾರೆ. 121 ಜೋಡಿಗಳ ಮದುವೆ ಮಾಡಿಸಿದ ಇವರಿಗೆ, ಮುಂದೆ 1021 ಜೋಡಿಗಳ ವಿವಾಹ ನೆರವೇರಿಸುವ ಶಕ್ತಿಯನ್ನು ದೇವರು ಕರುಣಿಸಲಿ," ಎಂದು ಶಿವನಗೌಡ ನಾಯಕ ಹಾರೈಸಿದರು.