×
Ad

ರಾಯಚೂರು | ಅಸಮರ್ಪಕ ದೇವದಾಸಿ ಸರ್ವೆ ಖಂಡಿಸಿ ಪ್ರತಿಭಟನೆ

Update: 2026-01-19 22:38 IST

ರಾಯಚೂರು : ದಾಖಲೆಗಳ ನೆಪವೊಡ್ಡಿ ದೇವದಾಸಿ ಮಹಿಳೆಯರನ್ನು ಗಣತಿಯಿಂದ ಹೊರಗಿಡುತ್ತಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಹಾಗೂ ಅಸಮರ್ಪಕ ಸರ್ವೆಯನ್ನು ಸರಿಪಡಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಮಕ್ಕಳ ಹೋರಾಟ ಸಮಿತಿಯ ವತಿಯಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲಾಯಿತು.

ವಯೋಮಿತಿ ಭೇದವಿಲ್ಲದೆ ಎಲ್ಲಾ ಮಾಜಿ ದೇವದಾಸಿ ಮಹಿಳೆಯರ ಸಮಗ್ರ ಸರ್ವೆ ನಡೆಸಬೇಕು. ಮುಂಬರುವ 2026ರ ಬಜೆಟ್‌ನಲ್ಲಿ ಮಾಜಿ ದೇವದಾಸಿಯರಿಗೆ ನೀಡುವ ಮಾಸಿಕ ಪಿಂಚಣಿಯನ್ನು 10 ಸಾವಿರಕ್ಕೆ ಏರಿಸಬೇಕು. ಅಲ್ಲದೆ, ಅವರ ಮಕ್ಕಳಿಗೆ ಉದ್ಯೋಗ ನೀಡಬೇಕು ಅಥವಾ ಪ್ರತಿ ತಿಂಗಳು 10 ಸಾವಿರ ರೂ. ನಿರುದ್ಯೋಗ ಭತ್ಯೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಭೂಸ್ವಾಧೀನ ಪ್ರಕ್ರಿಯೆಯ ಮೂಲಕ ಎಲ್ಲ ದೇವದಾಸಿ ಮಹಿಳೆಯರಿಗೆ ನಿವೇಶನ, ಮನೆ ಹಾಗೂ ಕೃಷಿ ಭೂಮಿಯನ್ನು ಒದಗಿಸಬೇಕು ಎಂದು ಒತ್ತಾಯಿಸಲಾಯಿತು. ನರೇಗಾ ಯೋಜನೆಯಡಿ ಕೂಲಿ ದಿನಗಳನ್ನು 200ಕ್ಕೆ ಹೆಚ್ಚಿಸಿ, ಪ್ರತಿದಿನ 1,000 ರೂ. ಕೂಲಿ ನೀಡಬೇಕು. ಜೀ ರಾಮ್‌ಜೀ ಬಿಲ್ ರದ್ದುಪಡಿಸಬೇಕು ಹಾಗೂ 2025ರ ಹೊಸ ವಿದ್ಯುತ್ ಮಸೂದೆಯನ್ನು ವಾಪಸ್ ಪಡೆಯಬೇಕು ಎಂದು ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿದವು.

ತಾಲೂಕಿನ 196 ಮಾಜಿ ದೇವದಾಸಿ ಮಹಿಳೆಯರಿಗಾಗಿ ಕಳೆದ 5 ವರ್ಷಗಳಿಂದ ನಡೆಯುತ್ತಿರುವ ಮನೆಗಳ ನಿರ್ಮಾಣ ಕಾರ್ಯವು ಅತ್ಯಂತ ಮಂದಗತಿಯಲ್ಲಿ ಸಾಗುತ್ತಿದೆ. ಇದನ್ನು ತ್ವರಿತವಾಗಿ ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಅಧಿಕಾರಿಗಳನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷೆ ಹೆಚ್.ಪದ್ಮಾ, ತಾಲೂಕು ಅಧ್ಯಕ್ಷೆ ಮಹಾದೇವಿ,‌ ಗೌರವಾಧ್ಯಕ್ಷ ಜಿ.ವೀರೇಶ, ಡಿ.ಎಸ್.ಶರಣಬಸವ, ಹೂಳೆಮ್ಮ ಕವಿತಾಳ, ರೇಣುಕಮ್ಮ ಮಾನವಿ, ಹೊಸೂರಮ್ಮ ಸಿರವಾರ, ಮುತ್ತಮ್ಮ ಲಿಂಗಸೂಗುರು,‌ ಸರೋಜಮ್ಮ ಮಸ್ಕಿ, ಬಡೆಮ್ಮ, ನರಸಮ್, ನರಸಿಂಹ, ಲಾಕಮ್ಮ, ಸಣ್ಣ ಯಲ್ಲಮ್ಮ, ಮುದುಕಮ್ಮ, ಶರಣಪ್ಪ, ಬಸಂತಿ, ಕೆಂಚವಮ್ಮ, ಹುಸೇನಮ್ಮ, ಸೇರಿದಂತೆ ಅನೇಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News