ರಾಯಚೂರು | ವಸತಿ ವಿನ್ಯಾಸದ ಅನುಮೋದನೆಗೆ ಲಂಚದ ಬೇಡಿಕೆ ಆರೋಪ : ಸುಡಾ ಕಚೇರಿಯಲ್ಲಿ ಡಿಸೇಲ್ ಸುರಿದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಯತ್ನ
ರಾಯಚೂರು: ವಸತಿ ವಿನ್ಯಾಸದ ಅನುಮೋದನೆಗೆ ಲಂಚದ ಬೇಡಿಕೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಆರೋಪಿಸಿ ವ್ಯಕ್ತಿಯೋರ್ವ ಮೈಮೇಲೆ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ಜಿಲ್ಲೆಯ ಸಿಂಧನೂರು ತಾಲೂಕಿನ ಸಿಂಧನೂರು ನಗರಾಭಿವೃದ್ದಿ ಪ್ರಾಧಿಕಾರದ ಕಚೇರಿಯಲ್ಲಿ ನಡೆದಿದೆ.
ಸಿಂಧನೂರು ನಗರದ ಭೂ ಮಾಲಕ ಶಂಕ್ರಪ್ಪ ಅಂಗಡಿ ಎನ್ನುವವರು 2017 ರಲ್ಲಿ ನಗರದ ಸರ್ವೇ ಸಂಖ್ಯೆ 965/10 ರಲ್ಲಿ 20 ಗುಂಟೆ ಜಮೀನನಲ್ಲಿ ಲೇಔಟ್ ಅಭಿವೃದ್ದಿ ಪಡಿಸಲು ಅರ್ಜಿ ಸಲ್ಲಿಸಿದ್ದು, ಇಲ್ಲಿಯವರೆಗೆ ಬರೀ ಪತ್ರ ವ್ಯವಹಾರ ನಡೆದಿದ್ದರೂ, ತಾತ್ಕಾಲಿಕ ಅನುಮೋದನೆ ಸಹ ನೀಡಿಲ್ಲ. ಅವರ ಪಕ್ಕದ ಜಮೀನಿನ ಮಾಲಕರು ನಂತರ ಅರ್ಜಿ ಸಲ್ಲಿಸಿದ್ದು, ಅವರಿಗೆ ತಾತ್ಮಾಲಿಕ ಅನುಮೋದನೆ ನೀಡಲಾಗಿದೆ. ಶಂಕ್ರಪ್ಪ ತಾತ್ಕಾಲಿಕ ವಿನ್ಯಾಸದ ಅನುಮೋದನೆ ಪಡೆದುಕೊಳ್ಳಲು ಎರಡು ಬಾರಿ ಚಲನ್ ಕಟ್ಟಿದ್ದರೂ, ತಾತ್ಕಾಲಿಕ ಅನುಮೋದನೆ ನೀಡಿಲ್ಲ. ಅಧಿಕಾರಿಗಳು ಲಂಚದ ಆಸೆಗೆ ವಿನಃಕಾರಣ ಕಚೇರಿಗೆ ಅಲೆದಾಡಿಸಿದ್ದಕ್ಕೆ ಬೇಸತ್ತು ತಾನೇ ತಂದಿದ್ದ ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
ಮಂಗಳವಾರ ಮಧ್ಯಾಹ್ನ ಸುಡಾ ಕಚೇರಿಗೆ ಆಗಮಿಸಿದ್ದ ಶಂಕ್ರಪ್ಪ ಕಚೇರಿಯಲ್ಲಿ ಅಧಿಕಾರಿಗಳಿಗೆ ಕಾದುಕುಳಿತಿದ್ದಾನೆ. ನಂತರ ಆಯುಕ್ತ ಅರುಣ್ ಹೆಚ್ ದೇಸಾಯಿಗೆ ದೂರವಾಣಿ ಕರೆ ಮಾಡಿ ವಿಷಯದ ಬಗ್ಗೆ ಮಾತುಕತೆ ನಡೆಸಿದ್ದಾನೆ. ಆಯುಕ್ತರಿಂದ ಸರಿಯಾದ ಸ್ಪಂದನೆ ನೀಡದೇ ಉಡಾಫೆ ಉತ್ತರ ದೊರಕಿದ್ದು, ಇದರಿಂದ ಮತ್ತಷ್ಟು ಮನವೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.
ತಕ್ಷಣವೇ ಅಲ್ಲಿದ್ದ ಸಿಬ್ಬಂದಿ ಆತನ ಕೈಲಿದ್ದ ಡಿಸೇಲ್ ಕ್ಯಾನ್ ಕಿತ್ತೇಸೆದು ಕಚೇರಿಯ ಹಿರಿಯ ಅಧಿಕಾರಿಗಳಿಗೆ ಹಾಗೂ ಪೊಲೀಸರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆತನ ಮನವೊಲಿಸಿದ್ದು,. ನಂತರ ಸುಡಾ ಆಯುಕ್ತ ಅರುಣ್ ಹೆಚ್ ದೇಸಾಯಿ, ಡಿವೈಎಸ್ಪಿ ಅವರೊಡನೆ ಶಾಸಕ ಹಂಪನಗೌಡ ಬಾದರ್ಲಿ ತುರ್ತು ಸಭೆ ನಡೆಸಿದರು ಎಂದು ತಿಳಿದು ಬಂದಿದೆ.