×
Ad

Raichur | ಮಮದಾಪುರ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ತಡೆಯಲು ಎಐಡಿವೈಓ ಆಗ್ರಹ

Update: 2026-01-14 16:25 IST

ರಾಯಚೂರು: ತಾಲೂಕಿನ ಮಮದಾಪುರ ಗ್ರಾಮದಲ್ಲಿ ಬೀದಿ ನಾಯಿಗಳ ಉಪಟಳ ಮಿತಿಮೀರಿದ್ದು, ಸಾರ್ವಜನಿಕರ ರಕ್ಷಣೆಗಾಗಿ ಅವುಗಳನ್ನು ತಕ್ಷಣವೇ ನಿಯಂತ್ರಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಓ) ಗ್ರಾಮ ಘಟಕದ ವತಿಯಿಂದ ಪಂಚಾಯಿತಿ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.

ಕಳೆದ ಹಲವು ದಿನಗಳಿಂದ ಗ್ರಾಮದಲ್ಲಿ ಬೀದಿ ನಾಯಿಗಳು ಭಯದ ವಾತಾವರಣ ಸೃಷ್ಟಿಸಿವೆ. ರಸ್ತೆಯಲ್ಲಿ ಓಡಾಡುವ ದಾರಿಹೋಕರು, ಮಹಿಳೆಯರು, ವೃದ್ಧರು ಹಾಗೂ ಮಕ್ಕಳ ಮೇಲೆ ನಾಯಿಗಳು ಹಠಾತ್ತನೆ ದಾಳಿ ಮಾಡುತ್ತಿವೆ. ನಾಯಿಗಳ ಹಾವಳಿಯಿಂದಾಗಿ ಜನರು ಮನೆಯಿಂದ ಹೊರಬರಲು ಆತಂಕಪಡುವಂತಾಗಿದೆ ಎಂದು ಸಂಘಟನೆ ದೂರಿದೆ.

ಕೇವಲ ಮನುಷ್ಯರಷ್ಟೇ ಅಲ್ಲದೆ, ಜಾನುವಾರುಗಳ ಮೇಲೂ ನಾಯಿಗಳು ಎರಗುತ್ತಿವೆ. ಮೂರು ದಿನಗಳ ಹಿಂದೆ ಕುರಿಗಳ ಮಂದೆಯ ಮೇಲೆ ದಾಳಿ ಮಾಡಿದ್ದ ನಾಯಿಗಳು, ಎರಡು ಕುರಿಗಳನ್ನು ಕಚ್ಚಿ ಸಾಯಿಸಿವೆ. ಇದರಿಂದ ಕುರಿಗಳ ಮಾಲೀಕರಿಗೆ ಆರ್ಥಿಕ ನಷ್ಟವುಂಟಾಗಿದ್ದು, ರೈತರು ಕಂಗಾಲಾಗಿದ್ದಾರೆ. ಈ ಕೂಡಲೇ ಪಂಚಾಯಿತಿ ಆಡಳಿತವು ಎಚ್ಚೆತ್ತುಕೊಂಡು ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರೂಪಾ ಸಿಂಗ್ ಅವರು ಮನವಿ ಸ್ವೀಕರಿಸಿ ಮಾತನಾಡಿ, ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಎಐಡಿವೈಓ ಸಂಘಟನೆಯ ಜಿಲ್ಲಾಧ್ಯಕ್ಷರಾದ ಚನ್ನಬಸವ ಜಾನೇಕಲ್ ಗ್ರಾಮ ಘಟಕದ ಮುಖಂಡರಾದ ಮಾರೆಪ್ಪ, ವೀರೇಶ್, ಮಾರ್ಕ್, ರಮೇಶ್, ತಿಮ್ಮಪ್ಪ, ಶಿವರಾಜ್, ರಾಮು, ಶಂಕರ್, ಯಲ್ಲಪ್ಪ, ಪರಮೇಶ್, ಹುಲಿಗೆಪ್ಪ, ಏಸು, ತಾಯಣ್ಣ, ಹಂಪಯ್ಯ ಮುಂತಾದವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News