ರಾಯಚೂರು | ಗುತ್ತಿಗೆ ಕಂಪನಿಗೆ ಬಿಲ್ ಬಾಕಿ : ಸಮಾಜ ಕಲ್ಯಾಣ ಇಲಾಖೆಯ ಪೀಠೋಪಕರಣಗಳು ಜಪ್ತಿ
ರಾಯಚೂರು: ವಸತಿ ನಿಲಯಗಳಿಗೆ ಆಹಾರ ಸಾಮಗ್ರಿ ಪೂರೈಸುವ ಗುತ್ತಿಗೆ ಸಂಸ್ಥೆಗೆ ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ, ನಗರದ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲಾದ ಅಪರೂಪದ ಘಟನೆ ನಡೆದಿದೆ.
ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ ಆಹಾರ ಸಾಮಗ್ರಿ ಪೂರೈಸುವ ಗುತ್ತಿಗೆಯನ್ನು 'ಪದ್ಮಾವತಿ ಎಂಟರ್‌ಪ್ರೈಸ್' ಸಂಸ್ಥೆ ಪಡೆದಿತ್ತು. ನಿಯಮಾನುಸಾರ ಇಲಾಖೆಯು ಗುತ್ತಿಗೆದಾರರಿಗೆ ಒಟ್ಟು 32.52 ಲಕ್ಷ ರೂ. ಹಣ ಪಾವತಿ ಮಾಡಬೇಕಿತ್ತು. ಆದರೆ, ಇಲಾಖೆಯು ಹಣ ಪಾವತಿಸಲು ವಿಳಂಬ ಮಾಡಿದ್ದರಿಂದ ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದರು.
ಜಿಲ್ಲಾ ಸತ್ರ ನ್ಯಾಯಾಲಯದ ಮಧ್ಯಂತರ ಆದೇಶದ ಮೇರೆಗೆ ಇಲಾಖೆಯು ಈ ಹಿಂದೆ 16.14 ಲಕ್ಷ ರೂ. ಪಾವತಿಸಿತ್ತು. ಆದರೆ, ಬಾಕಿ ಉಳಿದಿದ್ದ 16.91 ಲಕ್ಷ ರೂ. ಹಣವನ್ನು ನೀಡಲು ಮತ್ತೆ ವಿಳಂಬ ಧೋರಣೆ ಅನುಸರಿಸಿದಾಗ, ಗುತ್ತಿಗೆದಾರರು ಪುನಃ ನ್ಯಾಯಾಲಯದ ಬಾಗಿಲು ತಟ್ಟಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಬಡ್ಡಿ ಸಮೇತ ಬಾಕಿ ಹಣವನ್ನು ಪಾವತಿಸುವಂತೆ ಆದೇಶಿಸಿತ್ತು.
ನ್ಯಾಯಾಲಯದ ಈ ಆದೇಶವನ್ನೂ ಪಾಲಿಸಲು ಇಲಾಖೆ ವಿಫಲವಾದ ಕಾರಣ, ಅಧಿಕಾರಿಗಳ ಸೂಚನೆಯಂತೆ ಇಂದು ಕಚೇರಿಯ ಪೀಠೋಪಕರಣಗಳು ಹಾಗೂ ಇತರ ಸಾಮಗ್ರಿಗಳನ್ನು ಜಪ್ತಿ ಮಾಡಲಾಯಿತು. ಸರ್ಕಾರದ ಇಲಾಖೆಯೊಂದರ ಕಚೇರಿ ಸಾಮಗ್ರಿಗಳೇ ಜಪ್ತಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.