ರಾಯಚೂರು | ಅಭಿವೃದ್ಧಿ ಬಗ್ಗೆ ಪ್ರಶ್ನಿಸಿದರೆ ಶಾಸಕಿ ಬೆಂಬಲಿಗರಿಂದ ಜೀವ ಬೆದರಿಕೆ : ವಿಶ್ವನಾಥ ಬಲ್ಲಿದವ ಆರೋಪ
ರಾಯಚೂರು: ದೇವದುರ್ಗ ಕ್ಷೇತ್ರದಲ್ಲಿ ಸಾರ್ವಜನಿಕ ಸಮಸ್ಯೆಗಳಿಗೆ ಶಾಸಕಿ ಕರೆಮ್ಮ ನಾಯಕ ಅವರು ಸ್ಪಂದಿಸುತ್ತಿಲ್ಲ. ಅಕ್ರಮ ಮರಳು ಸಾಗಾಟ ಮತ್ತು ಅಭಿವೃದ್ಧಿ ಕುಂಠಿತವಾಗಿರುವ ಕುರಿತು ಧ್ವನಿ ಎತ್ತಿದರೆ, ಶಾಸಕಿಯ ಬೆಂಬಲಿಗರು ಜೀವ ಬೆದರಿಕೆ ಕರೆ ಹಾಗೂ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ಭೀಮ್ ಆರ್ಮಿಯ ದೇವದುರ್ಗ ತಾಲೂಕು ಅಧ್ಯಕ್ಷ ವಿಶ್ವನಾಥ ಬಲ್ಲಿದವ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2023-24ನೇ ಸಾಲಿನ ಅನೇಕ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಪೂರ್ಣಗೊಂಡಿರುವ ಕೆಲವು ಕಾಮಗಾರಿಗಳೂ ಅತ್ಯಂತ ಕಳಪೆ ಮಟ್ಟದ್ದಾಗಿವೆ. ದೇವದುರ್ಗ ತಾಲೂಕಿನ ಹತ್ತಾರು ಗ್ರಾಮಗಳಲ್ಲಿ ಇಂದಿಗೂ ಶೌಚಾಲಯಗಳ ವ್ಯವಸ್ಥೆಯಿಲ್ಲದೆ ಮಹಿಳೆಯರು ಪರದಾಡುವಂತಾಗಿದೆ. ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಶಾಸಕಿಯ ಬೆಂಬಲಿಗರು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದರು.
ತಮಗೆ ಬರುತ್ತಿರುವ ಜೀವ ಬೆದರಿಕೆ ಕರೆಗಳ ಕುರಿತು ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP), ಡಿಜಿಪಿ ಹಾಗೂ ವಿಧಾನಸಭಾ ಅಧ್ಯಕ್ಷರಿಗೆ ಲಿಖಿತ ದೂರು ನೀಡಲಾಗಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು, ಜನರಿಗೆ ನೀಡಿದ ಭರವಸೆಗಳು ಈಡೇರುವವರೆಗೂ ಹೋರಾಟ ಮುಂದುವರಿಸುವುದಾಗಿ ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ದೀಪಕ್ ಭಂಡಾರಿ, ಬಾಬಾಖಾನ್, ಎಚ್.ಎಂ. ಬಾಬು ಉಪಸ್ಥಿತರಿದ್ದರು.