ಕೇಂದ್ರ ಸರಕಾರದಿಂದ ನರೇಗಾ ಕಾಯ್ದೆ ವಿರೂಪಗೊಳಿಸುವ ಹುನ್ನಾರ : ಸಂಸದ ಜಿ.ಕುಮಾರ ನಾಯಕ
ರಾಯಚೂರು : ನರೇಗಾ ಕಾಯ್ದೆಯನ್ನು ವಿರೂಪಗೊಳಿಸಿರುವ ಕೇಂದ್ರ ಸರ್ಕಾರ ಕೂಲಿ ಕಾರ್ಮಿಕರ ದುಡಿಯುವ ಹಕ್ಕನ್ನು ಕಸಿದುಕೊಂಡಿದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಸಂಸದ ಜಿ.ಕುಮಾರನಾಯಕ ದೂರಿದರು.
ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರು ದಿನ ಉದ್ಯೋಗ ಖಾತ್ರಿ ಯೋಜನೆಯನ್ನು 125 ದಿನಗಳಿಗೆ ಹೆಚ್ಚಿಸುವುದಾಗಿ ಸಮರ್ಥಿಸಿಕೊಳ್ಳುವ ಕೇಂದ್ರ ಸರ್ಕಾರ ವರ್ಷವಿಡಿ ಉದ್ಯೋಗ ದೊರೆಯುವುದನ್ನು ತಡೆದಿದೆ. ಅಲ್ಲದೇ ಬೇಡಿಕೆ ಆಧಾರದ ಯೋಜನೆಯನ್ನು ಅವಶ್ಯಕತೆ ಆಧಾರದ ಮೇಲೆ ರೂಪಿತಗೊಳಿಸಿರುವುದು ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಇಲ್ಲದಂತೆ ಮಾಡಿದೆ ಎಂದರು.
ಸಂಸದೀಯ ಮಂಡಳಿಯ ಶಿಫಾರಸ್ಸುಗಳನ್ನು ಕಡೆಗಣಿಸಿ ಹೊಸ ಮಸೂದೆ ರೂಪಿಸಿ ಉದ್ಯೋಗ ಖಾತ್ರಿ ಯೋಜನೆಗೆ ಇದ್ದ ಘನತೆಗೆ ಕುಂದು ತರುವ ಪ್ರಯತ್ನವಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಉದ್ಯೋಗ ಖಾತ್ರಿ, ಮಾಹಿತಿ ಹಕ್ಕು, ಶಿಕ್ಷಣ ಹಕ್ಕು ಕಾಯ್ದೆಯನ್ನು ರೂಪಿಸಿರುವ ಕ್ರಾಂತಿಕಾರಿ ಹೆಜ್ಜೆಯನ್ನು ಎನ್‍ಡಿಎ ಸರ್ಕಾರ ದಿಕ್ಕುತಪ್ಪಿಸುವ ಕಾರ್ಪೋರೇಟ್ ವಲಯಕ್ಕೆ ಪೂರಕವಾಗುವ ಚಿಂತನೆ ಹೊಂದಿದೆ. ರಾಮನ ಕುರಿತು ತುಟಿ ಪ್ರೀತಿ ತೋರಿಸುವ ಸರ್ಕಾರ ಜನರ ಹೃದಯದಲ್ಲಿರುವ ರಾಮನನ್ನು ಕಡೆಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮುಹಮ್ಮದ್ ಶಾಲಂ, ಪಾಲಿಕೆಯ ಸದಸ್ಯ ಜಯಣ್ಣ, ಕಾಂಗ್ರೆಸ್ ಮುಖಂಡ ರವಿಬೋಸರಾಜ, ಕೆ.ಶಾಂತಪ್ಪ, ಜಯವಂತರಾವ ಪತಂಗೆ, ಎನ್.ಶ್ರೀನಿವಾಸರೆಡ್ಡಿ, ಜಿ.ಶಿವಮೂರ್ತಿ, ಅಮರೇಗೌಡ ಹಂಚಿನಾಳ, ಯುವ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ ಗಟ್ಟುಬಿಚ್ಚಾಲಿ ಸೇರಿದಂತೆ ಅನೇಕರಿದ್ದರು.