ಬೂತ್ ಮಟ್ಟದ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ: ಸಂಸದ ಜಿ.ಕುಮಾರ ನಾಯಕ ವಿರುದ್ಧ ರಂಗಪ್ಪ ಗೋಸಲ್ ಆರೋಪ
ದೇವದುರ್ಗ : ಲೋಕಸಭಾ ಚುನಾವಣೆಯಲ್ಲಿ ಬೂತ್ ಮಟ್ಟದಲ್ಲಿ ಪ್ರಮಾಣಿಕವಾಗಿ ಕೆಲಸ ಮಾಡಿದ ಕಾರ್ಯಕರ್ತರನ್ನು ಸಂಸದ ಜಿ. ಕುಮಾರ ನಾಯಕ ಅವರು ಕಡೆಗಣಿಸುತ್ತಿರುವ ನಡೆ ಬಹುತೇಕರಲ್ಲಿ ಬೇಸರ ಮೂಡಿಸಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ರಂಗಪ್ಪ ಗೋಸಲ್ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿರುವ ಕೆಲ ದಲ್ಲಾಳಿಗಳ ಮಾತು ಕೇಳಿಕೊಂಡು ಪಕ್ಷಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿದ ಮುಖಂಡರನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿದರು.
ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಲ್ಲಿಯೇ ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದ ಮುಖಂಡರಿಗೆ ಅನ್ಯಾಯವಾಗುತ್ತಿದ್ದು, ಲಿಂಗಾಯತ ಸಮುದಾಯದವರಿಗೆ ಮಾತ್ರ ಹುದ್ದೆಗಳು ನೀಡಲಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಟಿಎಪಿಎಂಸಿ, ಕೃಷಿ ಮಾರುಕಟ್ಟೆ, ಪಿಎಲ್‌ಡಿ ಬ್ಯಾಂಕ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಲಿಂಗಾಯತರಿಗೆ ಮಣೆ ಹಾಕಿ, ಹಿಂದುಳಿದ ಸಮುದಾಯದ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಹೇಳಿದರು.
ಲೋಕಸಭಾ ಚುನಾವಣೆಗೂ ಮೊದಲು ಹಿಂದುಳಿದ ವರ್ಗದ ಗಂಗಪಯ್ಯ ಪೂಜಾರಿ ಮನಸಗಲ್ ಅವರಿಗೆ ಎಪಿಎಂಸಿ ಅಧ್ಯಕ್ಷ ಸ್ಥಾನ ಲಭಿಸಿತ್ತು. ಆದರೆ ಕೆಲ ದಲ್ಲಾಳಿ ಮುಖಂಡರು ಜಿಲ್ಲಾಧ್ಯಕ್ಷರಿಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದರಿಂದ ಸಿಕ್ಕ ಅವಕಾಶ ಕೈತಪ್ಪಿತು ಎಂದು ಹೇಳಿದರು. ಪಕ್ಷ ಸಂಘಟನೆಗೆ ಒತ್ತು ನೀಡದೆ, ಅಧಿಕಾರಕ್ಕಾಗಿ ಇನ್ನೊಬ್ಬರ ಬಗ್ಗೆ ಸುಳ್ಳು ಹೇಳುವುದೇ ಕೆಲವರ ಕಾಯಕವಾಗಿದೆ ಎಂದು ಆರೋಪಿಸಿದರು.
ತಾಲೂಕಿನ ಮುಖಂಡರ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಹಾಗೂ ಜಿಲ್ಲಾಧ್ಯಕ್ಷರ ಅನುಮತಿ ಪಡೆಯದೇ ಪದಾಧಿಕಾರಿಗಳ ಆಯ್ಕೆ ನಡೆಯುತ್ತಿದೆ. ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಜಿಲ್ಲಾಧ್ಯಕ್ಷರ ಅನುಮತಿ ಇಲ್ಲದೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಮಾಡಿರುವುದನ್ನು ಮರುಪರಿಶೀಲಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಜಿಲ್ಲಾ ಉಪಾಧ್ಯಕ್ಷ ಎಕ್ಬಲ್ ಹೌದೊಡ್ಡಿ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನಮಾನ ನೀಡದೇ ಇರುವುದರಿಂದ ಮುಂಬರುವ ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಪಕ್ಷದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದರು. ಸಂಸದ ಜಿ. ಕುಮಾರ ನಾಯಕ ಅವರು ಗೆದ್ದ ಬಳಿಕ ತಾಲೂಕಿನಲ್ಲಿ ಒಂದೇ ಒಂದು ಕಾರ್ಯಕರ್ತರ ಸಭೆಯನ್ನೂ ನಡೆಸಿಲ್ಲ ಎಂದು ಟೀಕಿಸಿದರು.
ರಾಜವಾಸುದೇವ ನಾಯಕ ಮತ್ತು ಮರಿಲಿಂಗಪ್ಪ ವಕೀಲ ಮಾತನಾಡಿದರು.
ಈ ಸಂದರ್ಭದಲ್ಲಿ ಶಿವರಾಜ ವಕೀಲ, ಡಿಸಿಸಿ ಜಿಲ್ಲಾ ಸದಸ್ಯ ಸುಲ್ತಾನಬಾಬು ಕೊಪ್ಪರು, ಮಾನಪ್ಪ ಮೇಸ್ತ್ರೀ, ಚಂದಪಾಷ್ ಸೇರಿದಂತೆ ಇತರರು ಉಪಸ್ಥಿತರಿದ್ದರು.