ರಾಯಚೂರು | ಹಟ್ಟಿ ಚಿನ್ನದ ಗಣಿ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಮನವಿ
ರಾಯಚೂರು : ಹಟ್ಟಿ ಚಿನ್ನದ ಗಣಿ ಕಾರ್ಮಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಅನಾರೋಗ್ಯದಿಂದ ಬಳುಲುತ್ತಿರುವ ಕಾರ್ಮಿಕರನ್ನು ಅನರ್ಹಗೊಳಿಸಿ, ಕಾರ್ಮಿಕರ ಮಕ್ಕಳಿಗೆ ಉದ್ಯೋಗ ನೀಡಬೇಕು. ಗಣಿ ಆಡಳಿತ ಮಂಡಳಿ ನಿರ್ದೇಶಕರ ಮಂಡಳಿ ಸಭೆಯಲ್ಲಿ ಯಾವುದೇ ಷರತ್ತುಗಳನ್ನು ವಿಧಿಸದೆ ಅನುಮೋದನೆ ಪಡೆದು, ಗಣಿ ಕಾರ್ಮಿಕರ ಮಕ್ಕಳಿಗೆ ಉದ್ಯೋಗ ನೀಡಬೇಕು ಎಂದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಬೇಕೆಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ಹಟ್ಟಿ ಚಿನ್ನದ ಗಣಿ ಕಂಪನಿ ಘಟಕದಿಂದ ಬೆಂಗಳೂರಿನ ಪ್ರಧಾನ ಕಚೇರಿಯ ವ್ಯವಸ್ಥಾಪಕ ನಿರ್ದೇಶಕಿ ಶಿಲ್ಪಾ ಆರ್. ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಲಾಯಿತು.
ಕೂಡಲೇ ಮೆಡಿಕಲ್ ಅನ್ ಫಿಟ್ ಜಾರಿ ಮಾಡಬೇಕು. ಗಣಿ ಕಂಪನಿ ಲಾಭದಲ್ಲಿದೆ. ಚಿನ್ನದ ಬೆಲೆ ಗಗನಕ್ಕೆ ಏರುತ್ತಿದೆ. ಆದರೂ 2020-2021 ರಿಂದ ಇಲ್ಲಿಯವರೆಗೆ ಪಿಎಲ್‌ಐಬಿ (ಉತ್ಪಾದನ ಪ್ರೋತ್ಸಾಹ ಧನ) ಹಣ ನೀಡಿಲ್ಲ. ಕೂಡಲೇ ಕಾರ್ಮಿಕರಿಗೆ ಪಿಎಲ್‌ಐಬಿ ಕೂಡಬೇಕು. 2023 ರಿಂದ ಡಿಪಿಸಿ ಸಭೆ ನಡೆಸಿ ಕಾರ್ಮಿಕರಿಗೆ ಮುಂಬಡ್ತಿ ನೀಡಿ ಗ್ರೇಡ್ ನೀಡಬೇಕು. ಐಟಿಐ, ಡಿಪ್ಲೋಮಾ, ಬಿಇ, ತಾಂತ್ರಿಕ ಕಾರ್ಮಿಕರು ಎಲ್.ಹೆಚ್ ಡಿ.ಆಪರೇಟರ್, ಲೋಡರ್, ಲೋಕೂ, ಡೈಮಂಡ್ ಡ್ರಿಲಿಂಗ್ ಮಷಿನ್, ಡ್ರಿಲಿಂಗ್, ಹಲವು ಕಾರ್ಮಿಕರು ಗಣಿಗೆ ಮುಖ್ಯ ಕಾರ್ಮಿಕರಾಗಿ ಹಗಲು ರಾತ್ರಿಯೆನ್ನದೆ ದುಡಿಯುವ ಕಾರ್ಮಿಕರಿಗೆ ಮುಂಬಡ್ತಿ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಗ್ರೇಡ್ ಗಳು ನೀಡಬೇಕು. ಗಣಿ ಅಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ನರ್ಸ್ ಗಳನ್ನು ಕಾಯಂ ಮಾಡಬೇಕು. ಹಟ್ಟಿ ಚಿನ್ನದ ಗಣಿ ಕಂಪನಿಯ ವಿಭಾಗಗಳ ಖಾಸಗೀಕಣ ನಿಲ್ಲಿಸಬೇಕು ಎಂದು ಸಿಐಟಿಯು ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಸಿಐಟಿಯು ತಾಲೂಕು ಮುಖಂಡ ರಮೇಶ ವೀರಾಪೂರು, ಹಟ್ಟಿ ಘಟಕದ ಅಧ್ಯಕ್ಷ ಫಕ್ರುದ್ದೀನ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಗೋರ್ಕಲ್, ಸಹ ಕಾರ್ಯದರ್ಶಿಗಳಾದ ಅಲ್ಲಾಬಕ್ಷ ದೇವಪೂರು, ಎಂ.ಡಿ.ರಫಿ ಕೆ. ಲಿಂಗಸೂರು, ಶ್ರೀಧರ್ ಪೆಂಚಲಯ್ಯ ಉಪಸ್ಥಿತರಿದ್ದರು.