ರಾಯಚೂರು | ಶಿಕ್ಷಣ ಭಾಗೀದಾರರ ಸಮಾವೇಶ
ರಾಯಚೂರು : ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿ ಹೊಂದಲು ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗ್ಯ ಕ್ಷೇತ್ರಗಳು ಅತ್ಯಂತ ಮುಖ್ಯವಾಗಿದ್ದು, ಈ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಹೆಚ್ಚಿನ ಒತ್ತು ನೀಡುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪ್ರತಿಯೊಬ್ಬರ ಜವಾಬ್ದಾರಿ ಪ್ರಮುಖವಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಡಾ.ಅಜಯ್ ಧರ್ಮಸಿಂಗ್ ಅವರು ಹೇಳಿದರು.
ಫೆ.15ರ ಶನಿವಾರ ದಂದು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಕಲಬುರಗಿ ಆಯುಕ್ತಾಲಯ ಶಾಲಾ ಶಿಕ್ಷಣ ಇಲಾಖೆ ಹಾಗೂ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ ಇವರ ಸಹಯೋಗದಲ್ಲಿ ಶಿಕ್ಷಣ ಭಾಗೀದಾರರ ಸಮಾವೇಶ -2025ರ ಎರಡನೇ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಶಿಕ್ಷಣ ಅತ್ಯಂತ ದೊಡ್ಡ ಆಸ್ತ್ರ ಎಂಬ ಮಾತಿನಂತೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪ್ರೊ.ನಂಜುಂಡಪ್ಪ ಅವರ ವರದಿ ಪ್ರಕಾರ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯಾಗಬೇಕಾದರೆ ಮೊದಲು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಅಭಿವೃದ್ದಿ ಹೊಂದಬೇಕು. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
42 ಸಾವಿರಕ್ಕೂ ಹೆಚ್ಚು ಮಕ್ಕಳು ಪ್ರವೇಶ :
ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ಕಿತ್ತು ಹಾಕಲು ಸರ್ಕಾರದಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಮುಖ್ಯವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗುವಂತೆ 30 ಕೋಟಿ ರೂ. ವೆಚ್ಚದಲ್ಲಿ 1,008 ಶಾಲೆಗಳಲ್ಲಿ ನರ್ಸರಿ ತರಗತಿಗಳನ್ನು ಪ್ರಾರಂಭಿಸಲಾಗಿದೆ. ತರಗತಿ ಆರಂಭಿಸಿದ ಒಂದೂವರೆ ತಿಂಗಳಿನಲ್ಲಿ 42 ಸಾವಿರಕ್ಕೂ ಹೆಚ್ಚಿನ ಮಕ್ಕಳು ಪ್ರವೇಶಾತಿ ಪಡೆದಿದ್ದಾರೆ. ಇದೊಂದು ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾಗಿದೆ. ಇದರ ಜೊತೆಗೆ 100 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗಿದೆ ಎಂದರು.
ಇದೇ ವೇಳೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಅವರು ಮಾತನಾಡಿ, ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಶೈಕ್ಷಣಿಕ ಅಧ್ಯಯನ ಸಮಿತಿಯನ್ನು ರಚಿಸಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಆದರೆ ಅಧ್ಯಯನ ಸಮಿತಿಗಳು ಕೇವಲ ಇಲಾಖೆಯ ದಾಖಲೆಗಳನ್ನು ಪರಿಗಣಿಸಿ ವರದಿ ನೀಡುವುದಲ್ಲ. ಸ್ಥಳಕ್ಕೆ ಅನಿರೀಕ್ಷಿತ ಭೇಟಿ ಮಾಡಿ ಶಾಲೆಯಲ್ಲಿರುವ ವಾಸ್ತವಾಂಶಗಳನ್ನು ಪರಿಗಣಿಸಬೇಕು. ಆಗ ಮಾತ್ರ ಶಾಲೆಗಳಲ್ಲಿರುವ ಸಮಸ್ಯೆಗಳು ತಜ್ಞರಿಗೆ ತಿಳಿಯುತ್ತವೆ ಎಂದು ಹೇಳಿದರು.
ಕೇವಲ ಜಿಲ್ಲಾ ಕೇಂದ್ರದಲ್ಲಿ ಅದ್ಯಯನ ನಡೆಸದೇ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಅಧ್ಯಯನ ಸಮಿತಿಯ ಸದಸ್ಯರು ತೆರಳಿ ಗ್ರಾಮೀಣ ಭಾಗದಲ್ಲಿರುವ ಶಾಲೆಗಳ ಪರಿಸ್ಥಿತಿ ಹಾಗೂ ವಿದ್ಯಾರ್ಥಿಗಳಿಗಾಗುವ ಸಮಸ್ಯೆಗಳು ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಕಲ್ಯಾಣ ಕರ್ನಾಟಕ ಶೈಕ್ಷಣಿಕ ಅಧ್ಯಯನ ಸಮಿತಿ ಜೊತೆಗೆ ಜಿಲ್ಲೆಗೊಂದು ಅಧ್ಯಯನ ಸಮಿತಿ ಮಾಡಿದ್ದಲ್ಲಿ ಅನುಕೂಲವಾಗುತ್ತದೆ. ಜಿಲ್ಲಾ ಸಮಿತಿಗಳ ವರದಿಗಳ ಆಧಾರದ ಮೇಲೆ ಕಲ್ಯಾಣ ಕರ್ನಾಟಕದ ಸಮಗ್ರ ಶಿಕ್ಷಣದ ಸಮಸ್ಯೆ, ಸವಾಲುಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ ಎಂದರು.
ಕಲಬುರಗಿ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಆಕಾಶ ಎಸ್.ಅವರು ಮಾತನಾಡಿ, ಕಲ್ಯಾಣ ಕರ್ನಾಟಕದ ಅಂತರ ವಿಭಾಗಗಳಲ್ಲಿರುವ ಶೈಕ್ಷಣಿಕ ಸಮಸ್ಯೆಗಳನ್ನು ನಿರ್ಮೂಲನೆ ಮಾಡಲು ಹಾಗೂ ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಲು ಅಧ್ಯಯನ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ಕಾರ್ಯಚಟುವಟಿಕೆ ರಾಯಚೂರಿನಿಂದಲೇ ಪ್ರಾರಂಭವಾಗಲಿದೆ. ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗುತ್ತದೆ. ಇದಲ್ಲದೇ ಸಮಾವೇಶದ ಅಂತ್ಯದಲ್ಲಿ ಕಲ್ಯಾಣ ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ತರುವ ಬದಲಾವಣೆಗಳ ಕ್ರಿಯಾ ಯೋಜನೆ ಸಿದ್ದವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ., ಶಿಕ್ಷಣ ಇಲಾಖೆಯ ನಿರ್ದೇಶಕಿ ಮಮತಾ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆ.ಡಿ.ಬಡಿಗೇರ್, ಡಯಟ್ ಉಪ ನಿರ್ದೇಶಕರಾದ ಇಂದಿರಾ ಆರ್., ಶಿಕ್ಷಣ ಶೈಕ್ಷಣಿಕ ಅಧ್ಯಯನ ಸಮಿತಿ ಅಧ್ಯಕ್ಷೆ ಛಾಯಾ ಗಾಂವಕರ್, ಸಮಿತಿ ಸದಸ್ಯರಾದ ಅಬ್ದುಲ್ ಕದೀರ್, ಮಲ್ಲಿಕಾರ್ಜುನ ಎಮ್.ಎಸ್, ಫ್ರಾಂಸಿಸ್ ಬಾಯವರ, ರುದ್ರೇಶ್ ಎಸ್., ಎನ್.ಬಿ.ಪಾಟೀಲ್, ಯಶವಂತ್ ಹರಸೂರು, ಡಾ.ನಾಗಾಬಾಯಿ ಸೇರಿದಂತೆ ಇತರರು ಇದ್ದರು. ಕಾರ್ಯಕ್ರಮದ ನಿರೂರ್ಪಣೆಯನ್ನು ಶಿಕ್ಷಕಿ ಸುನೀತಾ ಎನ್., ಅವರು ನೆರವೇರಿಸಿದರು.