×
Ad

ರಾಯಚೂರು | ನೈಜ ಪತ್ರಕರ್ತರ ಹಿತ ಕಾಪಾಡಲು ಸಂಘ ಸದಾ ಮುಂಚೂಣಿ : ಶಿವಾನಂದ ತಗಡೂರು

ರಾಯಚೂರಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ

Update: 2025-12-25 23:17 IST

ರಾಯಚೂರು: ವೃತ್ತಿಯ ಘನತೆ ಕಾಪಾಡುವ ಹಾಗೂ ನೈಜ ಪತ್ರಕರ್ತರ ಹಿತ ರಕ್ಷಿಸುವಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸದಾ ಮುಂದಿರಲಿದೆ. ಬ್ಲಾಕ್‌ಮೇಲ್ ಮಾಡುವ ಪತ್ರಕರ್ತರಿಗೆ ಕಡಿವಾಣ ಹಾಕಲು ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.

ನಗರದ ಕನ್ನಡ ಭವನದಲ್ಲಿ ಗುರುವಾರ ಸಂಜೆ ನಡೆದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಯಚೂರು ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತರು ಇಂದು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅವರ ನೆರವಿಗಾಗಿ ಸಂಘವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಜೀವನ ನಿರ್ವಹಣೆಗೆ ಕಷ್ಟವಾಗಿದೆ ಎಂಬ ಕಾರಣಕ್ಕೆ ಕೆಲವರು ಬ್ಲಾಕ್‌ಮೇಲ್ ಮಾರ್ಗವನ್ನು ಹಿಡಿಯುವುದು ವೃತ್ತಿಗೆ ಗೌರವ ತರುವಂಥದ್ದಲ್ಲ. ನೈಜ ಪತ್ರಕರ್ತರ ಹಿತ ಕಾಪಾಡಿ, ನಕಲಿ ಪತ್ರಕರ್ತರಿಗೆ ಕಡಿವಾಣ ಹಾಕಲು ಸಂಘಟಿತ ಪ್ರಯತ್ನ ಅಗತ್ಯವಿದೆ ಎಂದು ಹೇಳಿದರು.

ಗ್ರಾಮೀಣ ಬಸ್ ಪಾಸ್ ಯೋಜನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಭರವಸೆಯಂತೆ ಬಜೆಟ್‌ನಲ್ಲಿಯೇ ಘೋಷಣೆ ಮಾಡಲಾಗಿದೆ. ಆದರೆ ಕೆಲ ತಾಂತ್ರಿಕ ಕಾರಣಗಳಿಂದ ಜಾರಿಗೆ ವಿಳಂಬವಾಗುತ್ತಿದೆ. ವಾರ್ತಾ ಇಲಾಖೆಯ ಕೆಲವು ನಿಯಮಗಳಿಂದ ತೊಂದರೆ ಉಂಟಾಗುತ್ತಿದ್ದು, ಅವುಗಳಲ್ಲಿ ಬದಲಾವಣೆ ತರಲು ಸಂಘ ನಿರಂತರವಾಗಿ ಒತ್ತಾಯಿಸುತ್ತಿದೆ. ಈ ಕುರಿತು ಮುಖ್ಯಮಂತ್ರಿ ಸಹ ಪೂರಕ ಸ್ಪಂದನೆ ನೀಡಿದ್ದಾರೆ ಎಂದು ತಿಳಿಸಿದರು.

ಆರೋಗ್ಯ ಸಂಜೀವಿನಿ ಯೋಜನೆಯನ್ನು ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾತ್ರ ಸೀಮಿತಗೊಳಿಸಿರುವುದನ್ನು ಎಲ್ಲ ಪತ್ರಕರ್ತರಿಗೂ ವಿಸ್ತರಿಸಬೇಕು ಎಂಬ ಬೇಡಿಕೆಯನ್ನು ಸಂಘ ನಿರಂತರವಾಗಿ ಮುಂದಿಟ್ಟುಕೊಂಡು ಬರುತ್ತಿದೆ. ಈ ಎರಡು ಪ್ರಮುಖ ಬೇಡಿಕೆಗಳು ಈಡೇರುವವರೆಗೆ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮೂಲ ಆಶಯದಿಂದಲೇ ರಾಜ್ಯದಲ್ಲಿ ಅನೇಕ ಸಂಘಟನೆಗಳು ಉದ್ಭವಿಸಿವೆ. ಎಲ್ಲರನ್ನು ಒಳಗೊಳ್ಳುವ ಮನೋಭಾವವೇ ನಮ್ಮ ಸಂಘಟನೆಯ ಶಕ್ತಿ. ಏಕಪಕ್ಷೀಯ ನಡೆ ಸರಿಯಲ್ಲ. ಲೇಬರ್ ಯೂನಿಯನ್ ಕಾಯ್ದೆಯಡಿ ನೋಂದಣಿಯಾದ ಏಕೈಕ ಸಂಘ ನಮ್ಮದು. ಸಂಘ ತನ್ನದೇ ಘನತೆ ಹೊಂದಿದ್ದು, 95 ವರ್ಷಗಳ ಇತಿಹಾಸವಿದೆ. ನಮ್ಮ ಸಂಘದ ಹೆಸರಿನಲ್ಲಿ ಮತ್ತೊಂದು ಸಂಘ ನೋಂದಣಿ ಮಾಡಬಾರದು ಎಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಹೇಳಿದರು.

ಸಂಘ ವಿರೋಧಿ ನಡೆ ನೈಜ ಪತ್ರಕರ್ತರಿಗೆ ಶೋಭೆ ತರುವುದಿಲ್ಲ. ಸಂಕಷ್ಟದ ಸಂದರ್ಭದಲ್ಲಿ ಸಂಘದ ಚುಕ್ಕಾಣಿ ಹಿಡಿದಿದ್ದೇವೆ. ಇಂದು ಒಂದು ಕೋಟಿ ರೂ.ಗೂ ಅಧಿಕ ಕ್ಷೇಮನಿಧಿ ಸಂಗ್ರಹಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಈ ಬಾರಿ ಅತ್ಯಂತ ಪಾರದರ್ಶಕವಾಗಿ ಚುನಾವಣೆ ನಡೆಸಿ ಮಾದರಿಯಾಗಿದ್ದೇವೆ. ಚುನಾವಣೆಯಲ್ಲಿ 54 ಲಕ್ಷ ರೂ. ಠೇವಣಿ ಸಂಗ್ರಹವಾಗಿದೆ. ಸೋಲು–ಗೆಲುವು ಸಹಜ. ಗೆದ್ದವರು ಹಿಗ್ಗಬಾರದು, ಸೋತವರು ಕುಗ್ಗಬಾರದು. ಹಿರಿಯರ ಅನುಭವ ಹಾಗೂ ಯುವಕರ ಶಕ್ತಿಯ ಸಮನ್ವಯದಿಂದ ಸಂಘ ಮತ್ತಷ್ಟು ಬಲಿಷ್ಠವಾಗುತ್ತದೆ ಎಂದು ಹೇಳಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ.ಸಿ. ಲೋಕೇಶ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಬಳಿಕ ಮಾತನಾಡಿ, ಅಧಿಕಾರ ಸ್ವೀಕರಿಸಿದಾಗ ಖಜಾನೆ ಖಾಲಿಯಾಗಿತ್ತು. ಐದು ವರ್ಷಗಳಲ್ಲಿ ಒಂದು ಕೋಟಿ ರೂ. ದತ್ತಿ ನಿಧಿ ಸ್ಥಾಪಿಸುವ ಗುರಿ ಇಟ್ಟುಕೊಂಡು ಅದನ್ನು ಈಡೇರಿಸಿದ್ದೇವೆ. ಕಳೆದ ಐದು ವರ್ಷಗಳಲ್ಲಿ 21 ಲಕ್ಷ ರೂ. ನೆರವನ್ನು ಸಂಕಷ್ಟದಲ್ಲಿದ್ದ ಪತ್ರಕರ್ತರಿಗೆ ನೀಡಲಾಗಿದೆ. ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಪ್ರಶಸ್ತಿಗಳನ್ನು ಆರಂಭಿಸಲಾಗಿದೆ. ನಿವೃತ್ತ ಪತ್ರಕರ್ತರ ದತ್ತಿ ಪ್ರಶಸ್ತಿ ಮೊತ್ತ 32 ಲಕ್ಷ ರೂ.ಗೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧ್ಯಕ್ಷ ಆರ್. ಗುರುನಾಥ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಮಹತ್ವ ಹೆಚ್ಚಿಸುವಲ್ಲಿ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಪಾತ್ರ ಮಹತ್ವದ್ದಾಗಿದೆ. ಈ ಬಾರಿ ರಾಜ್ಯ ಸಮ್ಮೇಳನ ರಾಯಚೂರಿನಲ್ಲಿ ನಡೆಯಲಿದ್ದು, ಎಲ್ಲರೂ ಒಗ್ಗೂಡಿ ಯಶಸ್ವಿಗೊಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಪತ್ರಕರ್ತ ಬಿ.ಎನ್. ನಂದಿಕೋಲಮಠ ಅವರ ಹೆಸರಿನಲ್ಲಿ ಸಹೋದರ ಶಿವಕುಮಾರ ನಂದಿಕೋಲಮಠ ಸಂಘಕ್ಕೆ ಒಂದು ಲಕ್ಷ ರೂ. ದತ್ತಿ ನಿಧಿ ದೇಣಿಗೆ ನೀಡಿದರು.

ರಾಜ್ಯ ಸಮಿತಿ ಸದಸ್ಯ ಬಸವರಾಜ ನಾಗಡದಿನ್ನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ಧಯ್ಯಸ್ವಾಮಿ ಕುಕನೂರು, ನಿಕಟಪೂರ್ವ ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಎಂ. ಪಾಷಾ ಹಟ್ಟಿ, ಉಪಾಧ್ಯಕ್ಷರಾದ ಸೂಗೂರೇಶ್ವರ ಎಸ್. ಗುಡಿ, ಮಹಾನಂದ ನಾಯಕ, ಅಶೋಕ ಬೆನ್ನೂರು, ಕಾರ್ಯದರ್ಶಿಗಳಾದ ಶರಣಯ್ಯ ಒಡೆಯರ್, ರಾಘವೇಂದ್ರ ಗುಮಾಸ್ತೆ, ಖಜಾಂಚಿ ಮಲ್ಲಿಕಾರ್ಜುನಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News