ರಾಯಚೂರು: ದಾಳಿಂಬೆ ಪಪ್ಪಾಯಿ ಬೆಳೆಗಾರರಿಗೆ ಪರಿಹಾರ ನೀಡಲು ಆಗ್ರಹ
ರಾಯಚೂರು: ಸತತ ಮಳೆಯಿಂದ ದಾಳಿಂಬೆ, ಪಪ್ಪಾಯಿ ಹಾಗೂ ಪೇರಲ ಬೆಳೆಯೆಲ್ಲ ಹಾಳಾಗಿದ್ದು, ರೈತರಿಗೆ ಸೂಕ್ತ ನಷ್ಟ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನಗರದ ನೂತನ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು, ಬಳಿಕ ಡಿಸಿ ಕಚೇರಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಕಳೆದ ತಿಂಗಳು ಎಡೆಬಿಡದೆ ಸುರಿದ ಭಾರೀ ಮಳೆಯಿಂದ ಸಾಕಷ್ಟು ಬೆಳೆಗಳು ಹಾಳಾಗಿದ್ದವು. ಅದರಲ್ಲೂ ಪಪ್ಪಾಯಿ, ದಾಳಿಂಬೆ ಹಾಗೂ ಪೇರಲ ಗಿಡಗಳಲ್ಲಿ ಹೂ ಕಾಯಿಗಳೆಲ್ಲ ಉದುರಿ ಹೋಗಿವೆ. ಎಕರೆಗೆ ಏನಿಲ್ಲವೆಂದರೂ 4.5 ಲಕ್ಷ ರೂವರೆಗೂ ಖರ್ಚು ಮಾಡಲಾಗುತ್ತಿದೆ. ಇದರಿಂದ ಲಕ್ಷಾಂತರ ರೂ. ಖರ್ಚು ಮಾಡಿದ್ದ ಬೆಳೆಗಳೆಲ್ಲ ಹಾಳಾಗಿ ಹೋಗಿವೆ. ರೈತರು ಮತ್ತೆ ಸಾಲದ ಸುಳಿಗೆ ಸಿಲುಕುವಂತಾಯಿತು ಎಂದು ಅಲವತ್ತುಕೊಂಡರು.
ಇನ್ನೂ ತೋಟಗಾರಿಕೆ ಬೆಳೆಗಾರರು ಪ್ರತಿ ವರ್ಷ ವಿಮೆ ಹಣ ಪಾವತಿಸುತ್ತೇವೆ. ಆದರೆ, ಸರ್ಕಾರ ಮಾತ್ರ ಬೆಳೆ ಹಾಳಾದಾಗ ವಿಮೆ ಹಣ ಬಿಡುಗಡೆ ಮಾಡುತ್ತಿಲ್ಲ. ಈ ವರ್ಷ ಸರ್ಕಾರವೇ ರಾಯಚೂರು ಜಿಲ್ಲೆಯನ್ನು ಬೆಳೆ ಹಾನಿ ಪ್ರದೇಶ ಎಂದು ಘೋಷಿಸಿದ್ದು, ಕೂಡಲೇ ರೈತರಿಗೆ ಸೂಕ್ತ ನಷ್ಟ ಪರಿಹಾರ ಕೊಡಿಸುವ ಕೆಲಸವಾಗಬೇಕಿದೆ ಎಂದು ಒತ್ತಾಯಿಸಿದರು. ಜಿಲ್ಲೆಯ ವಿವಿಧ ತೋಟಗಾರಿಕೆ ಬೆಳೆಗಾರರು ಇದ್ದರು.