ರಾಯಚೂರು | ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು: ರಾಜೇಶ್ ನಾಯಕ
ರಾಯಚೂರು : ಪರಿಸರ ಸಂರಕ್ಷಣೆ ಮತ್ತು ಪಕ್ಷಿಗಳ ಉಳಿವಿಗಾಗಿ ಪ್ರತಿಯೊಬ್ಬರು ಶ್ರಮಿಸಬೇಕು. ಬೇಸಿಗೆ ಇರುವುದರಿಂದ ಪಕ್ಷಿಗಳಿಗೆ ನೀರು ಉಣಿಸುವ ಕೆಲಸ ಎಲ್ಲರೂ ಮಾಡಬೇಕು ಎಂದು ವಲಯ ಅರಣ್ಯ ಅಧಿಕಾರಿಗಳಾದ ರಾಜೇಶ್ ನಾಯಕ ತಿಳಿಸಿದರು.
ಅವರು ಕೃಷ್ಣ ಗಿರಿ ಬಡಾವಣೆಯಲ್ಲಿ ಇಂದು ಕೃಷ್ಣಗಿರಿ ಬಡಾವಣೆಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಗ್ರೀನ್ ರಾಯಚೂರು, ಕಲಾ ಸಂಕುಲ ಸಂಸ್ಥೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಡಿ ಪಕ್ಷಿಗಳ ಉಳಿವಿಗಾಗಿ ಜಾಗೃತಿ ಅಭಿಯಾನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂತರ್ಜಲ ಮಟ್ಟ ಕುಸಿದ ಸಂದರ್ಭ, ಬತ್ತಿಹೋಗುತ್ತಿರುವ ಕೆರೆ, ಬಾವಿ ಹಿನ್ನೆಲೆ, ಮಾತು ಬಾರದ ಹಕ್ಕಿಗಳಿಗೆ ನೀರುಣಿಸುವ ಮೂಲಕ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಪ್ರಾಣಿ ಪಕ್ಷಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಬಡಾವಣೆಯವರು ಜೂನ್ ಸಂದರ್ಭ ಮಾಡುವ ಯಾವುದೇ ಕಾರ್ಯಗಳಿಗೆ ಇಲಾಖೆ ಸಹಕಾರ ನೀಡಲಿದೆ. ಪರಿಸರ ಉಳಿಸಲು ಎಲ್ಲರ ಸಾಥ್ ಮುಖ್ಯ ಎಂದರು.
ಪಕ್ಷಿಪ್ರೇಮಿ ಸಲಾವುದ್ದೀನ್ ಮಾತನಾಡಿ, ಪಕ್ಷಿಗಳ ಬಗ್ಗೆ ಬಾಲ್ಯದಿಂದಲೇ ಒಲವು ಹೊಂದಿದ್ದರಿಂದ ಅತಿ ಹೆಚ್ಚು ಗುಬ್ಬಿಗಳು ನಮ್ಮ ಮನೆಯಲ್ಲಿ ಮನೆ ಮಾಡಿವೆ. ಸದ್ಯ 85 ಗೂಡುಗಳಿವೆ. 150ಕ್ಕೂ ಹೆಚ್ಚು ಗುಬ್ಬಿಗಳಿವೆ. ಪ್ರತಿಯೊಬ್ಬರಲ್ಲೂ ಪಕ್ಷಿಗಳ ಬಗ್ಗೆ ಪ್ರೀತಿ ತೋರಬೇಕಿದೆ. ನಮಗೆ ಜೀವಿಸಲು ಇರಬೇಕಾದ ಹಕ್ಕು ಎಲ್ಲ ಹಕ್ಕಿಗಳಿಗೂ ಇದೆ. ಬುಟ್ಟಿ ಸೇರಬೇಕಾದ ಅನೇಕ ವಸ್ತುಗಳನ್ನು ಬಳಸಿ ಗುಬ್ಬಚ್ಚಿ ಗೂಡು ಮಾಡುವ ಕಡೆ ಒಲವು ಇದೆ. ಗುಬ್ಬಚ್ಚಿಗಳು ಪರಿಸರ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅವು ತಿಂದು ಬಿಸಾಡಿದ ಬೀಜಗಳು ಅಲ್ಲಲ್ಲಿ ಬಿದ್ದು ಮರಗಳಾಗಿವೆ. ಅವು ಬೀಜ ಪ್ರಸಾರಕಗಳಂತೆ ಎಂದರು.
ಗ್ರೀನ್ ರಾಯಚೂರು ಸಂಸ್ಥೆಯ ಸರಸ್ವತಿ ಕಿಲಕಿಲೆ ಮಾತನಾಡಿ, ಜೀವ ವೈವಿಧ್ಯತೆ ಅತ್ಯಗತ್ಯವಾಗಿಬೇಕು. ಕಂಫರ್ಟ್ ಜೀವನ ಅಂದುಕೊಳ್ಳುತ್ತೇವೆ. ಆದರೆ ಅದು ಹಾಗಲ್ಲ. ಪ್ಲಾಸ್ಟಿಕ್ ಮುಕ್ತ ಜೀವನ ಅಗತ್ಯ ಇದೆ. ಪ್ಲಾಸ್ಟಿಕ್ ನಿಂದ ತಯಾರಿಸಿದ ಊಟದ ತಟ್ಟೆಗಳನ್ನು ಬಳಸಬೇಡಿ. ಪರಿಸರ ಉಳಿವಿಗೆ ಪ್ರಯತ್ನಿಸಿ ಎಂದರು.
ಜೈಲು ಅಧೀಕ್ಷಕಿ ಅನಿತಾ ಹಿರೇಮನಿ ಮಾತನಾಡಿ, ಮನೆಗೊಂದು ಗಿಡ ನೆಟ್ಡು ಸೆಲ್ಫಿ ತೆಗೆದುಕೊಳ್ಳುವ ಬದಲಿಗೆ ಮರವಾಗಿ ಬೆಳೆಸುವತ್ತ ಗಮನ ಹರಿಸಬೇಕು ಎಂದರು.
ರೇಖಾ ಬಡಿಗೇರ್, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹನುಮಂತ್ರಾಯ ಕಾಕರಗಲ್ ಮಾತನಾಡಿದರು.
ಸಾಧಕರಿಗೆ ಸನ್ಮಾನಿಸಲಾಯಿತು. ರಂಗೋಲಿ ಬಿಡಿಸಿದವರಿಗೆ ಪ್ರಮಾಣ ಪತ್ರ ನೀಡಲಾಯಿತು. ಕಲಾಸಂಕುಲ ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಡಿಗೇರ್ ನಿರೂಪಿಸಿದರು.