×
Ad

ರಾಯಚೂರು | ಹತ್ತಿಗೆ ನಷ್ಟ ಪರಿಹಾರ ಘೋಷಿಸಲು ಆಗ್ರಹಿಸಿ ರೈತರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

Update: 2025-10-08 17:38 IST

ರಾಯಚೂರು : ಹತ್ತಿಗೆ ನಷ್ಟ ಪರಿಹಾರ ಘೋಷಿಸಬೇಕು ಹಾಗೂ ಹತ್ತಿ ಖರೀದಿ ಕೇಂದ್ರ ತೆರೆಯಿಸಿ ಪ್ರತಿ ಕ್ವಿಂಟಲ್‌ಗೆ 10,000 ರೂ. ನಿಗದಿ ಪಡಿಸಬೇಕು ಎಂದು ಆಗ್ರಹಿಸಿ, ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (AIKKMS) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಬಳಿಕ ಜಿಲ್ಲಾಧಿಕಾರಿಗಳಿಗೆ ಮತ್ತು ಎಪಿಎಂಸಿ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನಕಾರನ್ನು ಉದ್ದೇಶಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ರಾಜ್ಯ ಕಾರ್ಯದರ್ಶಿಗಳಾದ ಬಿ.ಭಗವಾನ್ ರೆಡ್ಡಿ ಅವರು ಮಾತನಾಡಿ, ಪ್ರತಿ ವರ್ಷ ಹತ್ತಿ ಬೆಳೆಗಾರರಿಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ಸರ್ಕಾರಗಳು ಫಸಲು ಬರುವ ಮುಂಚಿತವಾಗಿಯೇ ಖರೀದಿ ಕೇಂದ್ರ ತೆಗೆಯದೆ ರೈತರಿಗೆ ತೊಂದರೆ ಉಂಟುಮಾಡುತ್ತಿವೆ. ಈ ನಿರ್ಲಕ್ಷ್ಯದಿಂದ ರೈತರು ವ್ಯಾಪಾರಸ್ಥರ ಬಲೆಗೆ ಬಿದ್ದು ಕಡಿಮೆ ದರಕ್ಕೆ ಹತ್ತಿ ಮಾರುತ್ತಿದ್ದಾರೆ. ಸರ್ಕಾರವು ಪ್ರತಿ ವರ್ಷ 10,000 ಕೋಟಿ ರೂ. ಆವರ್ತ ನಿಧಿ ಮೀಸಲಿಡಬೇಕು ಎಂದರು.

ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಮಿತಿಯ ಸದಸ್ಯ ಚನ್ನಬಸವ ಜಾನೇಕಲ್ ಮಾತನಾಡಿ, ಯಾವುದೇ ಪ್ರಚಾರವಿಲ್ಲದೆ ಏಕಾಏಕಿಯಾಗಿ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿರುವುದು ರೈತರ ವಿರುದ್ಧದ ಕ್ರಮವಾಗಿದೆ. ಇದರ ಪರಿಣಾಮವಾಗಿ ವ್ಯಾಪಾರಸ್ಥರು ಲಾಭಪಡೆಯುತ್ತಿದ್ದು, ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆನ್‌ಲೈನ್ ರಿಜಿಸ್ಟ್ರೇಷನ್ ತಕ್ಷಣ ರದ್ದು ಮಾಡಬೇಕು ಎಂದು ಆಗ್ರಹಿಸಿದರು.

ಎಪಿಎಂಸಿ ಸಹಕಾರ ಕಾರ್ಯದರ್ಶಿ ಕೃಷ್ಣ ಮಾತನಾಡಿ, ಅ. 21ರೊಳಗೆ ಹತ್ತಿ ಖರೀದಿ ಕೇಂದ್ರ ತೆರೆಯಲಾಗುತ್ತದೆ ಎಂದು ಭರವಸೆ ನೀಡಿದರು.

ಈ ವರ್ಷ ನಿರಂತರ ಮಳೆಯಿಂದಾಗಿ ಹತ್ತಿ ಬೆಳೆ ಎಕರೆಗೆ 12–15 ಕ್ವಿಂಟಲ್‌ನಿಂದ 5–6 ಕ್ವಿಂಟಲ್‌ಗೆ ಕುಸಿದಿದೆ. ರೈತರಿಗೆ ಸರಿಯಾದ ಸಮೀಕ್ಷೆ ನಡೆಯದ ಕಾರಣ ನಷ್ಟದ ಅಂದಾಜು ಸ್ಪಷ್ಟವಾಗಿಲ್ಲ. ಆದ್ದರಿಂದ ಸರ್ಕಾರವು ತಕ್ಷಣ ಬೆಳೆ ನಷ್ಟ ಸಮೀಕ್ಷೆ ನಡೆಸಿ, ಎಕರೆಗೆ 25,000 ರೂ. ಪರಿಹಾರ ಘೋಷಿಸಬೇಕು ಎಂದು ಮನವಿ ಮಾಡಿದರು.

ಕೇಂದ್ರ ಸರ್ಕಾರವು ಗಾರ್ಮೆಂಟ್ ಉದ್ಯಮದ ನೆಪದಲ್ಲಿ ಹತ್ತಿಯ ಮೇಲೆ ಶೇ.11ರಷ್ಟು ಆಮದು ಸುಂಕವನ್ನು ರದ್ದುಪಡಿಸಿರುವುದು ರೈತರ ಪರವಾಗಿ “ಮಾರಣಾಂತಿಕ ನಿರ್ಧಾರ” ಎಂದು ಸಂಘಟನೆಯವರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಅಮೆರಿಕ ಮತ್ತು ಯುರೋಪಿನ ದೇಶಗಳಿಂದ ಅಗ್ಗದ ಹತ್ತಿ ಭಾರತದ ಮಾರುಕಟ್ಟೆಗೆ ಹರಿದುಬರುತ್ತಿದ್ದು, ಸ್ಥಳೀಯ ರೈತರಿಗೆ ಬೆಲೆ ಕುಸಿತ ಉಂಟಾಗಿದೆ ಎಂದು ಆರೋಪಿಸಿದರು.

ತಕ್ಷಣ ಎಲ್ಲಾ ತಾಲೂಕುಗಳಲ್ಲಿ ಹತ್ತಿ ಖರೀದಿ ಕೇಂದ್ರ ತೆರೆಯಬೇಕು, ಪ್ರತಿ ಕ್ವಿಂಟಲ್‌ಗೆ 10,000 ರೂ. ನಿಗದಿ ಪಡಿಸಬೇಕು, ಬೆಳೆ ನಷ್ಟ ಪರಿಹಾರ ನೀಡಬೇಕು, ಹತ್ತಿ ಆಮದು ನಿಷೇಧಿಸಬೇಕು ಮತ್ತು ರೈತರ ಸಾಲ ಮನ್ನಾ ಮಾಡಬೇಕು ಎಂದು ರೈತರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಸಂಘಟನೆ ಜಿಲ್ಲಾ ಕಾರ್ಯದರ್ಶಿಗಳಾದ ಮಲ್ಲನಗೌಡ ಅಂಚೆಸಗೂರು, ಜಿಲ್ಲಾ ಉಪಾಧ್ಯಕ್ಷರಾದ ದುರ್ಗಣ್ಣ ಅಡಕಲಗುಡ್ಡ, ವೀರೇಶ ಜಕ್ಕಲದಿನ್ನಿ, ರಿಹಾನುದ್ದಿನ್, ಹುಲಿಗೆಪ್ಪ, ವಂದಲಯ್ಯ ಅಡಕಲಗುಡ್ಡ, ಆದ್ಯಪ್ಪ ಕಲ್ಲೂರು, ಹನುಮಯ್ಯ ಕಲ್ಲೂರು, ಶರಣಗೌಡ ಆಲ್ಕೋಡ, ಹನುಮಯ್ಯ ದೊರೆ ಗಲಗ, ಶಾಂಶಪ್ಪ ಏನ್ ಗಣೆಕಲ್, ಭೀಮೇಶ ಗುಂಜಹಳ್ಳಿ ಇನ್ನಿತರ ರೈತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News