ರಾಯಚೂರು | ಎಸ್‌ಎಚ್‌ಜಿ ಮಹಿಳೆಯರಿಗೆ ಮೀನು ಸಾಕಣೆ, ನಿರ್ವಹಣೆ ತರಬೇತಿ
ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಮೀನು ಸಾಕಣೆ ಸಹಕಾರಿ : ಬಸವನಗೌಡ ಎನ್.
ರಾಯಚೂರು : ಸ್ವ-ಸಹಾಯ ಗುಂಪಿನ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಮೀನು ಸಾಕಾಣಿಕೆ ಮತ್ತು ನಿರ್ವಹಣೆ ತರಬೇತಿಯು ಸಹಕಾರಿಯಾಗಲಿದ್ದು, ಮಹಿಳೆಯರು ತರಬೇತಿಯನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರಾದ ಬಸವನಗೌಡ ಎನ್. ಅವರು ಸಲಹೆ ಮಾಡಿದರು.
ಸೆ. 10ರ ಬುಧವಾರದಂದು ಜಿಲ್ಲೆಯ ಮಾನ್ವಿ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಅಭಿಯಾನ, ಜಿಲ್ಲಾ ಪಂಚಾಯತ್ ರಾಯಚೂರು, ಮೀನುಗಾರಿಕೆ ಇಲಾಖೆ ರಾಯಚೂರು, ತಾಲೂಕು ಪಂಚಾಯತ್ ಮಾನ್ವಿ, ಎನ್.ಆರ್.ಎಲ್.ಎಮ್ ಘಟಕ ಮಾನವಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವ ಸಹಾಯ ಗುಂಪಿನ ಮಹಿಳೆಯರಿಗೆ ಮೀನು ಸಾಕಾಣಿಕೆ ಮತ್ತು ನಿರ್ವಹಣೆ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ವ್ಯವಸಾಯ, ತೋಟಗಾರಿಕೆ, ರೇಷ್ಮೆ ಸಾಕಣಿ, ಕೋಳಿ ಮತ್ತು ಡೈರಿ ಹಾಗೂ ಇತರೇ ಕಸುಬುಗಳ ಜೊತೆಗೆ ಮೂಲ ಉದ್ದೇಶಕ್ಕೆ ಧಕ್ಕೆಯಾಗದ ರೀತಿ ಮೀನು ಸಾಕಣಿಕೆ ಮಾಡಬಹುದು. ತ್ಯಾಜ್ಯ ವಸ್ತುಗಳನ್ನು ಮೀನಿಗೆ ಆಹಾರವಾಗಿ ಬಳಸುವ ಮೂಲಕ ಶೂನ್ಯ ಬಂಡವಾಳದಲ್ಲಿ ಅಧಿಕ ಇಳುವರಿ ಮತ್ತು ಲಾಭ ಪಡೆಯಬಹುದು ಎಂದರು.
ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾದ ದೀಪಾ ಅರಳಿಕಟ್ಟಿ ರವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಮೀನು ಸಾಕಾಣಿಕೆ ಮತ್ತು ನಿರ್ವಹಣೆಯ ಎರಡು ದಿನದ ತರಬೇತಿಯು ಸ್ವ ಸಹಾಯ ಗುಂಪಿನ ಮಹಿಳೆಯರು ಆರ್ಥಿಕವಾಗಿ ಸಬಲೀಕರಣಕ್ಕೆ ಅನುಕೂಲವಾಗಲಿದೆ. ಸ್ವ ಸಹಾಯ ಗುಂಪಿನ ಮಹಿಳೆಯರು ಎರಡು ದಿನದ ತರಬೇತಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಶಾಂತ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್ ಕಡೆಮಣಿ, ಎನ್.ಆರ್.ಎಲ್.ಎಮ್ ತಾಲೂಕು ವ್ಯವಸ್ಥಾಪಕ ಖಾಸಿಂ, ವಲಯ ಮೇಲ್ವಿಚಾರಕರಾದ ಸೂರತ್ ಪ್ರಸಾದ್ ಗಟ್ಟು, ಶರಣಬಸವ, ಉಮೇಶ್, ಡಿಇಓ ಬಸವರಾಜ, ತಾಲೂಕು ಸಂಪನ್ಮೂಲ ವ್ಯಕ್ತಿ ರುದ್ರಮ್ಮ ಸೇರಿದಂತೆ ಸ್ವ-ಸಹಾಯ ಗುಂಪಿನ ಸದಸ್ಯರು ಕಾರ್ಯಕ್ರಮದಲ್ಲಿ ಇದ್ದರು.