ರಾಯಚೂರು | ಸಿಜೆಐ ಮೇಲಿನ ದಾಳಿ ಖಂಡಿಸಿ ನ.1 ರಂದು ʼʼಹಲೋ ಮಾದಿಗರೇ ಚಲೋ ಹೈದರಾಬಾದ್ʼʼ ಹೋರಾಟ
ರಾಯಚೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲಿನ ದಾಳಿಯನ್ನು ಖಂಡಿಸಿ ನ.1 ರಂದು ಹಲೋ ಮಾದಿಗರೇ ಚಲೋ ಹೈದರಾಬಾದ್ ಹೋರಾಟದ ಮೂಲಕ ಸಂವಿಧಾನ ವಿರೋಧಿ ವಕೀಲ ರಾಕೇಶ ಕಿಶೋರ ಅವರ ಮೇಲೆ ದೇಶದ್ರೋಹಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಬೃಹತ್ ರ್ಯಾಲಿ ನಡೆಯಲಿದೆ ಎಂದು ಮಾದಿಗ ದಂಡೋರ ತಾಲೂಕ ಅಧ್ಯಕ್ಷರಾದ ದುಳ್ಳಯ್ಯ ಗುಂಜಳ್ಳಿ ಅವರು ಹೇಳಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಂದಕೃಷ್ಣ ಮಾದಿಗ ಅವರ ನೇತೃತ್ವದಲ್ಲಿ ಹೈದರಾಬಾದ್ ನಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದರು.
ಈ ಹೋರಾಟದಲ್ಲಿ ಎರಡು ಲಕ್ಷಕ್ಕಿಂತ ಅಧಿಕ ಜನರು ಭಾಗವಹಿಸಲಿದ್ದಾರೆ. ಸಿಜೆಐ ಮೇಲಿನ ದಾಳಿ ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಇದು ನ್ಯಾಯಾಂಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವ ಗುರಿಯೊಂದಿಗೆ ನಡೆಸಿರುವ ಅತಿ ದೊಡ್ಡ ಪಿತೂರಿಯಾಗಿದೆ ಎಂದು ಅವರು ಆರೋಪಿಸಿದರು.
ನ್ಯಾಯಮೂರ್ತಿಗಳ ಮೇಲೆ ನಡೆದ ದಾಳಿಯನ್ನು ಇಲ್ಲಿಯವರೆಗೆ ಕೇಂದ್ರ ಮಾನವ ಹಕ್ಕು ಆಯೋಗ ಹಾಗೂ ದೆಹಲಿಯ ಪೊಲೀಸ್ ಇಲಾಖೆಯಾಗಿರಬಹುದು, ನ್ಯಾಯಾಲಯದ ಪೊಲೀಸ್ ಸಿಬ್ಬಂದಿಗಳು ಸಹ ಸುಮೋಟೋ ಕೇಸ್ ದಾಖಲಿಸದೇ ನಿರ್ಲಕ್ಷ್ಯ ವಹಿಸಿರುವುದು ದೇಶದಲ್ಲಿ ನಮ್ಮಂತಹ ಬಡಪಾಯಿ ದಲಿತರಿಗೆ ನ್ಯಾಯ ಸಿಗುವುದಾದರೆ ಹೇಗೆ?
ಸಿಜೆಐ ಮೇಲೆ ನಡೆದ ದಾಳಿಯನ್ನು ಭಾರತ ಸರ್ಕಾರ ಪ್ರತ್ಯೇಕ ತನಿಖೆ ಕೈಗೊಳ್ಳಬೇಕು. ರಾಕೇಶ್ ಕಿಶೋರ್ ವಕೀಲರ ಮೇಲೆ ದೇಶದ್ರೋಹಿ ಪ್ರಕರಣವನ್ನು ದಾಖಲಿಸಿ ಹಾಗೂ ದೇಶದಿಂದ ಗಡಿಪಾರು ಮಾಡಬೇಕು. ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನ್ಯಾಯಾಂಗಕ್ಕೆ ಇನ್ನಷ್ಟು ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಂಜಿತ್ ದಂಡೋರ, ಸುರೇಶ ದುಗನೂರು, ಜಕ್ರಪ್ಪ ಹಂಚಿನಾಳ, ಗೋವಿಂದ ಈಟೇಕರ್, ನರಸಿಂಹಲು ಗಾಜರಾಳ ಸೇರಿದಂತೆ ಉಪಸ್ಥಿತರಿದ್ದರು.