×
Ad

ರಾಯಚೂರು | ಓಪೆಕ್ ಆಸ್ಪತ್ರೆಗೆ ನ್ಯಾ.ಎಚ್.ಎ.ಸಾತ್ವಿಕ್ ಭೇಟಿ : ಪರಿಶೀಲನೆ

Update: 2025-09-10 19:42 IST

ರಾಯಚೂರು : ನಗರದ ರಾಜೀವಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ (ಓಪೆಕ್) ಹಿರಿಯ ಶ್ರೇಣಿಯ ದಿವಾಣಿ ನ್ಯಾಯಾಧೀಶರು ಆಗಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಚ್.ಎ.ಸಾತ್ವಿಕ್ ಅವರು ಸೆ.10ರ ಬುಧವಾರ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಮಧ್ಯಾಹ್ನ 12.45ರ ಸುಮಾರಿಗೆ ಆಸ್ಪತ್ರೆಗೆ ಪ್ರವೇಶಿಸಿದ ನ್ಯಾಯಾಧೀಶರು, ಆಸ್ಪತ್ರೆಯಲ್ಲಿನ ರೋಗಿಗಳು ಮತ್ತು ಅವರ ಕುಟುಂಬದವರ ಜೊತೆ ಮಾತನಾಡಿ, ಆಸ್ಪತ್ರೆಯಲ್ಲಿನ ವೈದ್ಯಕೀಯ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು.

ಆಸ್ಪತ್ರೆಯ ಪ್ರವೇಶದ ವೇಳೆ, ಆಸ್ಪತ್ರೆಯ ಹೊರಾಂಗಣದಲ್ಲಿ ಕುಳಿತಿದ್ದ ರೋಗಿಯೊಬ್ಬರನ್ನು ನ್ಯಾಯಾಧೀಶರು ಮಾತನಾಡಿಸಿದರು. ಆಸ್ಪತ್ರೆಯ ಬಾಗಿಲು ಬಳಿ ಮಲಗಿದ್ದ ಮಹಿಳಾ ರೋಗಿಯೊಬ್ಬರಿಗೆ ವಿಚಾರಿಸಿದಾಗ, ವೈದ್ಯರಿಗಾಗಿ ಕಾಯುತ್ತಿರುವುದು ತಿಳಿಯಿತು. ಈ ರೀತಿ ರೋಗಿಗಳು ವೈದ್ಯರಿಗಾಗಿ ಕಾಯುವುದು ಆಸ್ಪತ್ರೆಯಲ್ಲಿ ತಪ್ಪಬೇಕು. ಸಂಬಂಧಿಸಿದ ವೈದ್ಯಾಧಿಕಾರಿಗಳಿಗೆ ಈ ವಿಷಯ ತಿಳಿಸಿ ಸರಿಪಡಿಸಿಕೊಳ್ಳಲು ನ್ಯಾಯಾಧೀಶರು ಸೂಚನೆ ನೀಡಿದರು.

ಯುರೋಲಾಜಿ ವಿಭಾಗ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಸಂಚರಿಸಿದ ನ್ಯಾಯಾಧೀಶರು, ಅಲ್ಲಿ ದಾಖಲಾಗಿದ್ದ ರೋಗಿಗಳೊಂದಿಗೆ ಮಾತನಾಡಿದರು. ಆಸ್ಪತ್ರೆಯಲ್ಲಿ ಸಿಗುವ ವಿವಿಧ ಚಿಕಿತ್ಸೆ ಹಾಗೂ ಊಟದ ವ್ಯವಸ್ಥೆ ಕುರಿತು ರೋಗಿಗಳಿಂದ ಮಾಹಿತಿ ಪಡೆದರು.

ಎಲ್ಲಾ ವೈದ್ಯರು ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಆಗಮಿಸಬೇಕು. ಸಮಯಕ್ಕೆ ಸರಿಯಾಗಿ ಬಾರದ ವೈದ್ಯರ ವಿರುದ್ಧ ಕ್ರಮಜರುಗಿಸಬೇಕೆಂದು ಆಸ್ಪತ್ರೆಯ ವಿಶೇಷಾಧಿಕಾರಿಗಳಿಗೆ ಸೂಚನೆ ನೀಡಿದರು.

ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ, ಉಪಚಾರ ಮತ್ತು ಔಷಧೋಪಚಾರವನ್ನು ಸಮರ್ಪಕವಾಗಿ ನೀಡುವಂತೆ ಸಂಬಂಧಿಸಿದ ವೈದ್ಯರಿಗೆ ನಿರ್ದೇಶನ ನೀಡಲಾಯಿತು.

ಈ ಸಂದರ್ಭದಲ್ಲಿ ಓಪೆಕ್ ಆಸ್ಪತ್ರೆಯ ವಿಶೇಷಾಧಿಕಾರಿ ಡಾ.ರಮೇಶ ಸಾಗರ್, ಆಸ್ಪತ್ರೆಯ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಪ್ರಸಾದ್, ಡಾ.ವಿನಿತು, ಡಾ.ವಿನಯ್ ಬದ್ರಿ, ಡಾ.ಮಂಜುನಾಥ, ಡಾ.ಶೈಲೇಶ್, ಡಾ.ರಾಘವೇಂದ್ರ, ಡಾ.ವಿಜಯ ಮಹಾಂತೇಶ್, ಡಾ.ಅನಿಲ್ ಗೋಪಿನಾಥ್, ಡಾ.ಸುರೇಶ್ ಸಾಗರ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News