ರಾಯಚೂರು | ಯರಮರಸ್‌ನಲ್ಲಿ ಕಲಬುರಗಿ ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ
ರಾಯಚೂರು: ನಗರದ ಯರಮರಸ್ ಕ್ಯಾಂಪ್ ಬಳಿಯ ಆಪ್ತಾಬ್ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ನಲ್ಲಿ 2025–26ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯರಮರಸ್ ಅವರ ಸಹಯೋಗದಲ್ಲಿ ಅ.17ರಂದು ಆಯೋಜಿಸಲಾಯಿತು.
ಕಲಬುರಗಿ ವಿಭಾಗದ ಜಂಟಿ ನಿರ್ದೇಶಕ ಎಂ. ವಿಜಯಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಅವರು ಮಾತನಾಡಿ, ವೈಜ್ಞಾನಿಕ ಚಿಂತನೆ ಮತ್ತು ಸೃಜನಾತ್ಮಕತೆಯ ಮಹತ್ವವನ್ನು ಮಕ್ಕಳಿಗೆ ಮನವರಿಕೆ ಮಾಡಿದರು. ಮಹಾಭಾರತ ಮತ್ತು ರಾಮಾಯಣದಂತಹ ಆದರ್ಶ ಗ್ರಂಥಗಳಲ್ಲಿ ಅಡಗಿರುವ ವೈಜ್ಞಾನಿಕ ಅಂಶಗಳನ್ನು ಉದಾಹರಣೆಗಳ ಮೂಲಕ ವಿವರಿಸಿ, ಗರ್ಭದಲ್ಲಿಯೇ ಶಿಶು ಆಲಿಸುವ ವೈಜ್ಞಾನಿಕ ಸತ್ಯವನ್ನು ಶ್ರೀಕೃಷ್ಣ ಮತ್ತು ಸುಭದ್ರೆಯ ಕಥೆಯ ಮೂಲಕ ಸ್ಪಷ್ಟಪಡಿಸಿದರು.
ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಳ್ಳುವಂತೆ ಕರೆ ನೀಡಿ, “ಗೆಲುವು-ಸೋಲು ಎರಡೂ ಪಾಠ ನೀಡುವುವು. ಸೋತವರ ತ್ಯಾಗದಲ್ಲಿಯೇ ಗೆಲುವು ಅಡಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಪ್ತಾಬ್ ಸಂಸ್ಥೆಯ ಅಧ್ಯಕ್ಷ ಸಿರಾಜ್ ಅವರು, ಇಲಾಖೆಯು ನೀಡಿದ ಅವಕಾಶಕ್ಕಾಗಿ ಕೃತಜ್ಞತೆ ಸಲ್ಲಿಸಿ, ತಮ್ಮ ಶಿಕ್ಷಕರಾಗಿ ಸೇವೆ ಸಲ್ಲಿಸಿದ ದಿನಗಳ ಅನುಭವ ಹಂಚಿಕೊಂಡರು.
ಅಧ್ಯಕ್ಷೀಯ ಭಾಷಣ ಮಾಡಿದ ಚಂದ್ರಶೇಖರ್ ಭಂಡಾರಿ ಅವರು, ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಮಾನವ ಕುಲದ ಒಳಿತಿಗಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
“ಮಾನವಕುಲದ ಒಳಿತಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ” ಎಂಬ ವಿಷಯದ ಅಡಿಯಲ್ಲಿ ನಡೆದ ಸ್ಪರ್ಧೆಗೆ ನಿರ್ಣಾಯಕರಾಗಿ ವೀರೇಂದ್ರ ಪಾಟೀಲ್ (ಮುಖ್ಯೋಪಾಧ್ಯಾಯ, ಸರ್ಕಾರಿ ಪ್ರೌಢಶಾಲೆ ಮರ್ಚೇದ್) ಮತ್ತು ಸಂಗಮೇಶ್ ಕೋಟೆ (ಮುಖ್ಯೋಪಾಧ್ಯಾಯ, ಸರ್ಕಾರಿ ಪ್ರೌಢಶಾಲೆ ಮಲ್ಕಾಪುರ, ಸಿಂಧನೂರ) ಭಾಗವಹಿಸಿದ್ದರು.
ಕಾರ್ಯಕ್ರಮದ ನೋಡಲ್ ಅಧಿಕಾರಿಗಳಾಗಿ ಮುರಳಿಧರ ರಾವ್ ಕುಲಕರ್ಣಿ, ಗದ್ದಿ ಬಸಪ್ಪ ಮತ್ತು ಸುಜಾತ (ಉಪನ್ಯಾಸಕರು, ಡಯಟ್ ಯರಮರಸ್) ಉಪಸ್ಥಿತರಿದ್ದರು. ಮಂಜುನಾಥ್ (ಶಿಕ್ಷಣ ಸಂಯೋಜಕ) ಮತ್ತು ಕೋದಂಡ ರೆಡ್ಡಿ (ಬಿಆರ್‌ಪಿ, ರಾಯಚೂರು) ನಿರ್ವಹಿಸಿದರು.
ಈ ಸ್ಪರ್ಧೆಯಲ್ಲಿ ಕಲಬುರಗಿ ವಿಭಾಗದ ಬೀದರ್, ಬಾಗಲಕೋಟೆ, ಬಿಜಾಪುರ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ನಾಟಕ ತಂಡಗಳು ಹಾಗೂ ಅವರ ಮಾರ್ಗದರ್ಶಿ ಶಿಕ್ಷಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡ ಹಾಗೂ ಮಾಜಿ ಆರ್‌ಡಿಎ ಸದಸ್ಯ ಗೋವಿಂದ ರೆಡ್ಡಿ ಉಪಸ್ಥಿತರಿದ್ದರು. ಶಿಕ್ಷಕಿ ಸಾಜಿದಾ ಫಾತಿಮಾ ವಂದಿಸಿದರು.