×
Ad

ರಾಯಚೂರು | ಡಿ.ರಾಂಪೂರ ಗ್ರಾಮದಲ್ಲಿ ಮೇಕೆ ಮರಿಗಳನ್ನು ಹೊತ್ತೊಯ್ದ ಚಿರತೆ; ಆತಂಕದಲ್ಲಿ ಗ್ರಾಮಸ್ಥರು

Update: 2025-07-10 20:12 IST

ಸಾಂದರ್ಭಿಕ ಚಿತ್ರ

ರಾಯಚೂರು: ತಾಲೂಕಿನ ಡಿ.ರಾಂಪೂರ(ಡೊಂಗರಾಂಪೂರು) ಗ್ರಾಮದ ಪರಮೇಶ್ವರ‌ ಬೆಟ್ಟದಲ್ಲಿ ವಾಸವಾಗಿರುವ ಗಂಡು ಚಿರತೆ ಬುಧವಾರ ರಾತ್ರಿ ಮೇಕೆ ಮರಿವೊಂದನ್ನು ಹೊತ್ತೊಯ್ದಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಮೇ ತಿಂಗಳ ಆರಂಭದಲ್ಲಿ ಕಾಣಿಸಿಕೊಂಡು ಅರಣ್ಯ ಇಲಾಖೆಯ ಬೋನಿಗೆ ಇದುವರೆಗೆ ಸೆರೆಯಾಗದೇ ಗ್ರಾಮದ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡುತ್ತಿದೆ. ವಲಯ ಅರಣ್ಯ ಅಧಿಕಾರಿಗಳು ಈಗಾಗಲೇ ಎರೆಡು ಬೋನು ಹಾಕಿ ಚಿರತೆಗೆ ಬಲೆ‌ ಬೀಸಿದರೂ ಬೋನಿಗೆ ಬಿದ್ದಿಲ್ಲ.

ಡೊಂಗರಾಂಪುರು ಗ್ರಾಮದ ಬೆಟ್ಟಕ್ಕೆ ಹೊಂದಿಕೊಂಡು ಗುಡಿಸಲು ಹಾಕಿ ವಾಸವಾಗಿರುವ ತಾಯಪ್ಪ ಎಂಬುವವರು ಹೊರಗೆ ಕಟ್ಟಿಹಾಕಿದ ಎರೆಡು ಮೇಕೆಯ ಮರಿಗಳನ್ನು ಎತ್ತಿಕೊಂಡು ಹೋಗಿ ತಿಂದು ಹಾಕಿದೆ. ಇದರ ಹೆಜ್ಜೆ ಗುರುತುಗಳು, ಕುರುಹುಗಳು ಕಾಣಿಸಿಕೊಂಡಿದ್ದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಅರಣ್ಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅರಣ್ಯ ಇಲಾಖೆಯ ತಾಲೂಕು ವಲಯ ಅಧಿಕಾರಿ ರಾಜೇಶ್ ನಾಯಕ ಮಾತನಾಡಿ, 2 ವರ್ಷದ ಗಂಡು ಚಿರತೆ ಸೆರೆಗೆ ಎರೆಡು ಕಡೆ ಬಲೆ ಬೀಸಲಾಗಿದೆ. ಬೋನಿನ ಬಳಿಗೆ ಬಂದು ವಾಪಸ್ ಹೋಗಿದೆ, ಆಹಾರ ಹುಡುಕುತ್ತಾ ಬೆಟ್ಟದ ಕೆಳಗೆ ಬಂದಿರಬಹುದು. ಚಿರತೆ ಬೋನಿಗೆ ಬೀಳಲಿದೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು. ರಾತ್ರಿ ವೇಳೆ ಇಬ್ಬರು ಸಿಬ್ಬಂದಿ ನೇಮಿಸಲಾಗಿದ್ದು, ಹಗಲಿನಲ್ಲಿ ನಾಲ್ಕು ಸಿಬ್ಬಂದಿ ಗ್ರಾಮದಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News