ರಾಯಚೂರು | ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಒಂದು ದಿನದ ಉಚಿತ ಕಾರ್ಯಾಗಾರ
ರಾಯಚೂರು : ವಿದ್ಯಾರ್ಥಿಗಳು ತಮ್ಮಅಧ್ಯಯನದೊಂದಿಗೆ ಸ್ಪಷ್ಟ ಗುರಿ ಇಟ್ಟುಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಮರ್ಪಕವಾದ ಪೂರ್ವ ಸಿದ್ಧತೆ ಅಗತ್ಯ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಹೇಳಿದರು.
ಫೆ.11ರ ಮಂಗಳವಾರದಂದು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಇನ್ಸೈಟ್ ಐ.ಎ.ಎಸ್ ಅಕಾಡೆಮಿ ಬೆಂಗಳೂರು ಮತ್ತು ಅನರ್ಘ ಐ.ಎ.ಎಸ್ ಅಕಾಡೆಮಿ ಬೆಂಗಳೂರು ಹಾಗೂ ಎಸ್.ಕೆ.ಇ.ಎಸ್. ಪ್ಯಾರಾಮೆಡಿಕಲ್ ಕಾಲೇಜ್ ರಾಯಚೂರು ಇವರುಗಳ ಸಂಯುಕ್ತಾಶ್ರಯದಲ್ಲಿ ʼವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಒಂದು ದಿನದ ಉಚಿತ ಕಾರ್ಯಾಗಾರʼಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಅಭ್ಯರ್ಥಿಗಳಿದ್ದು, ಆದರೆ ಅವರಿಗೆ ಬೇಕಾದ ಮಾರ್ಗದರ್ಶನ ನೀಡುವವರ ಕೊರತೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ತರಬೇತಿ ಕಾರ್ಯಾಗಾರದ ಸದುಪಯೋಗಪಡೆದುಕೊಳ್ಳಬೇಕು ಜೊತೆಗೆ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧಿಸಬೇಕೆಂದರು.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ ಅವರು ಮಾತನಾಡಿ, ಬೆಂಗಳೂರು, ಮೈಸೂರು, ಧಾರವಾಡ ಉತ್ತಮ ಶಿಕ್ಷಣವನ್ನು ನೀಡುತ್ತವೆ. ರಾಯಚೂರು ಹಿಂದುಳಿದ ಜಿಲ್ಲೆ ಇಲ್ಲಿ ಸರಿಯಾದ ಶಿಕ್ಷಣ ಸಿಗುವುದಿಲ್ಲ. ಎಂಬ ಭಾವನೆಯಿಂದ ವಿದ್ಯಾರ್ಥಿಗಳು ಹೊರಬರಬೇಕು. ತಮ್ಮ ವೃತ್ತಿಯ ಮೇಲೆ ಪ್ರತಿಯೊಬ್ಬರು ಗಂಭೀರವಾದ ಪರಿಕಲ್ಪನೆಯನ್ನು ಹೊಂದಿರಬೇಕು ಎಂದರು.
ಬೆಂಗಳೂರಿನ ಇನ್ಸೆಟ್ ಐ.ಎ.ಎಸ್. ಅಕಾಡೆಮಿನ ನಿರ್ದೇಶಕರಾದ ಜಿ.ಬಿ.ವಿನಯಕುಮಾರ ಅವರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ವಿಶೇಷವಾದ ಪ್ರತಿಭೆ ಇರುತ್ತದೆ. ಅದನ್ನು ಹೊರ ಹಾಕಲು ಆಗದೇ ಹಿಂದೆ ಉಳಿಯುತ್ತಾರೆ. ಜ್ಞಾನ ಎಂಬುವುದು ಎಲ್ಲ ಕಡೆಗಳಿಂದಲೂ ಬರುತ್ತದೆ. ಅದನ್ನು ಪಡೆಯುವ ಸಾಮರ್ಥ್ಯ ಪ್ರತಿಯೊಬ್ಬರಲ್ಲಿಯೂ ಇರಬೇಕು. ಪ್ರತಿಯೊಬ್ಬರಲ್ಲಿಯೂ ನಮ್ರತೆಯ ಪ್ರತಿರೂಪ ಇರಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಐಎಎಸ್, ಕೆಎಸ್ ಅಧಿಕಾರಿಗಳು ತಮ್ಮ ಅನುಭವ, ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುತ್ತಿರುವುದು ನಿಮಗೆ ಸಿಕ್ಕ ಅದೃಷ್ಟವಾಗಿದೆ. ಇಂತಹ ಮಹತ್ವದ ದಿನದಲ್ಲಿ ಅಧಿಕಾರಿಗಳು ನೀಡುವ ಮಾರ್ಗದರ್ಶನ ಮತ್ತು ಸಲಹೆಗಳನ್ನು ಪಡೆದುಕೊಂಡು ಸಾವಿರಾರು ಜನರಿಗೆ ನೀವು ಪ್ರೇರಣೆಯಾಗಬೇಕು ಎಂದರು.
ವಿಷಯಗಳ ಮನವರಿಕೆ :
ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವುದಕ್ಕೆ ಮುನ್ನ ಮಾಡಿಕೊಳ್ಳಬೇಕಾದ ಪೂರ್ವ ಸಿದ್ಧತೆಗಳೇನು?, ಯಾವ ವಿಧಾನದಲ್ಲಿ ಓದಿದರೆ ಹೆಚ್ಚಿನ ಅನುಕೂಲವಾಗುತ್ತದೆ, ಯಾವ ವಿಷಯಗಳ ಮೇಲೆ ಒತ್ತು ನೀಡಬೇಕು, ಓದಿದ್ದನ್ನು ಗ್ರಹಿಸಿಕೊಳ್ಳುವ ಕೌಶಲವನ್ನು ವೃದ್ಧಿಸಿಕೊಳ್ಳುವುದು ಹೇಗೆ, ಯಾವ ಪರೀಕ್ಷೆಗೆ ಯಾವ ಪಠ್ಯಕ್ರಮವನ್ನು ಓದಿಕೊಳ್ಳಬೇಕು, ಅದಕ್ಕೆ ಸಂಬಂಧಿಸಿದ ಪಠ್ಯಸಾಮಗ್ರಿಗಳು ಎಲ್ಲಿ ದೊರೆಯುತ್ತವೆ, ದಿನಪತ್ರಿಕೆಗಳ ಓದಿನಿಂದಾಗುವ ಲಾಭಗಳೇನು, ಪ್ರಚಲಿತ ವಿದ್ಯಮಾನಗಳನ್ನು ತಿಳಿದುಕೊಳ್ಳುವುದರ ಮಹತ್ವವೇನು ಎಂಬಿತ್ಯಾದಿ ವಿಷಯಗಳನ್ನು ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಆಪ್ತವಾಗಿ ಹಂಚಿಕೊಂಡರು. ಪರೀಕ್ಷಾ ಭಯ ಹೋಗಲಾಡಿಸುವ ಪ್ರಯತ್ನವನ್ನು ಪರಿಣಾಮಕಾರಿಯಾಗಿ ಮಾಡಿದರು.
ವಿದ್ಯಾರ್ಥಿಗಳಿಂದ ಉತ್ತಮ ಅಭಿಪ್ರಾಯ ವ್ಯಕ್ತ :
ಪಾಲ್ಗೊಂಡಿದ್ದವರಿಗೆ ಐಎಎಸ್, ಐಪಿಎಸ್, ಕೆಎಎಸ್, ಪಿಎಸ್ಐ, ಐಬಿಪಿಎಸ್, ಎಫ್ಡಿಸಿ, ಎಸ್ಡಿಸಿ ಮೊದಲಾದ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಅನುಕೂಲವಾಗುವ ಪುಸ್ತಕಗಳ ಪ್ರದರ್ಶನವನ್ನೂ ಕಾರ್ಯಾಗಾರದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಾಗಾರದಿಂದ ಬಹಳ ಅನುಕೂಲವಾಯಿತು. ಮಾಹಿತಿ ಮತ್ತು ಮಾರ್ಗದರ್ಶನದ ಮಹಾಪೂರವೇ ಇತ್ತು. ಪರೀಕ್ಷಾ ಆಕಾಂಕ್ಷಿಗಳಿಗೆ ಉತ್ತಮ ದಿಕ್ಕನ್ನು ಕಾರ್ಯಾಗಾರ ತೋರಿಸಿಕೊಟ್ಟಿತು ಎಂಬ ಅಭಿಪ್ರಾಯ ಭಾಗವಹಿಸಿದ್ದ ವಿದ್ಯಾರ್ಥಿಗಳಿಂದ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬೀನ್ ಮೊಹಪತ್ರ, ರಾಯಚೂರು ವಿಭಾಗದ ಸಹಾಯಕ ಆಯುಕ್ತರಾದ ಗಜಾನನ ಬಾಲೆ, ಅನರ್ಘ ಐಎಎಸ್ ಆಕಾಡಮಿಯ ನಿರ್ದೇಶಕರಾದ ಮನೋಜ, ಗ್ರೇಡ್-2 ತಹಶೀಲ್ದಾರ್ ಭೀಮರಾಯ, ಅಶೋಕ ಪವಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಚಿದಾನಂದ, ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಸಂಗಮೇಶ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಶೋಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ವೆಂಕಣ್ಣ, ಎಕೆಇಎಸ್ ಪ್ಯಾರಾಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಬಾಬುರಾವ್ ಸೇಗುಣಸಿ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಇದ್ದರು.