ರಾಯಚೂರು | ಪೊಲೀಸರು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು : ಎಸ್ಪಿ ಪುಟ್ಟಮಾದಯ್ಯ
ರಾಯಚೂರು: ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಲ್ಲಿ ಅದಕ್ಕೆ ಘಟನೆಗೆ ಕಾರಣವಾದ ವ್ಯಕ್ತಿಯ ಮನಸ್ಸು ಹಾಗೂ ಬುದ್ದಿ ಶಕ್ತಿ ಮುಖ್ಯವಾಗಿರುತ್ತದೆ. ಮಾನಸಿಕ ಆರೋಗ್ಯ ಕಾಯ್ದೆಯಲ್ಲಿ ಈ ಕುರಿತು ಅನೇಕ ಕಾನೂನು ನಿಯಮಗಳಿದ್ದು, ಅವುಗಳನ್ನು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ತಿಳಿದುಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಹೇಳಿದರು.
ಅವರಿಂದು ನಗರದ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ 2017ರ ಕಾನೂನು ನಿಯಮಗಳ ಕುರಿತು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಆಯಾ ಠಾಣೆಯ ವ್ಯಾಪ್ತಿಯಲ್ಲಿ ಮಾನಸಿಕ ಅಸ್ವಸ್ಥರು ಕಂಡುಬಂದಲ್ಲಿ ಪೊಲೀಸರು ಏನು ಮಾಡಬೇಕು ಎಂಬುವುದು ಬಹಳ ಮುಖ್ಯವಾಗಿರುತ್ತದೆ. ಸಮಾಜದಲ್ಲಿ ಒಬ್ಬ ವ್ಯಕ್ತಿಯಿಂದ ಅಶಾಂತಿ ಉಂಟಾದಲ್ಲಿ ಮೊದಲು ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗುತ್ತದೆ. ಏಕೆಂದರೆ ಮನುಷ್ಯ ಮಾನಸಿಕವಾಗಿ ಖಿನ್ನತೆಗೆ ಒಳಗಾದಾಗ ಆ ವ್ಯಕ್ತಿ ಸಮಾಜಕ್ಕೆ ಹಾನಿ ಉಂಟು ಮಾಡುವುದು ಮತ್ತು ಸಮಾಜಕ್ಕೆ ಅಪಾಯವಾಗುವಂತೆ ನಡೆದುಕೊಳ್ಳುತ್ತಾನೆ. ಆದ್ದರಿಂದ ಮೊದಲು ಆ ವ್ಯಕ್ತಿಯ ಮಾನಸಿಕ ಆರೋಗ್ಯವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಪೊಲೀಸರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಮಾನಸಿಕ ಅಸ್ವಸ್ಥರು ಕಂಡುಬಂದಲ್ಲಿ ಅಥವಾ ಸಾರ್ವಜನಿಕರು ಅವರ ಬಗ್ಗೆ ಮಾಹಿತಿ ನೀಡಿದ್ದಲ್ಲಿ ಮೊದಲು ಆ ವ್ಯಕ್ತಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು. ಆ ನಂತರ ಠಾಣೆಯ ಲಾಕಪ್‍ನಲ್ಲಿ ಹಾಕದೇ ಆ ವ್ಯಕ್ತಿಯ ವಾರಸುದಾರರ ಪತ್ತೆಗೆ ಮುಂದಾಗಬೇಕು. ಒಂದು ವೇಳೆ ಆ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಸಿಗದಿದ್ದಲ್ಲಿ ಕಾಣೆಯಾದ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಕಾಯ್ದೆಯ ಕುರಿತು ಉಪನ್ಯಾಸ ನೀಡಿದ ರಿಮ್ಸ್ ಆಸ್ಪತ್ರೆ ಮಾನಸಿಕ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ.ರಮೇಶಬಾಬು ಮಾತನಾಡಿ, ಮಾನವನ ಪ್ರತಿಯೊಂದು ಕೋಶದಲ್ಲಿಯೂ ಮನಸ್ಸು ಇರುತ್ತದೆ. ಮನಸ್ಸು ಹೃದಯ ಅಥವಾ ತಲೆಯಲ್ಲಿರುವುದಿಲ್ಲ. ಆದ್ದರಿಂದ ನಿಮ್ಮ ನೀವು ಮೊದಲು ಅರ್ಥೈಸಿಕೊಳ್ಳಬೇಕು. ಮಾನಸಿಕ ಆರೋಗ್ಯ ಆರೈಕೆ ಕಾಯ್ದೆಯೂ ಸಮುದಾಯದ ಪಾಲ್ಗೊಳ್ಳುವಿಕೆಯ ಆಧಾರದ ಮೇಲೆ ನಿಂತಿದೆ ಪ್ರತಿಯೊಬ್ಬರೂ ಕಾಯ್ದೆಯ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾನಸಿಕ ರೋಗ ತಜ್ಞರಾದ ಅನಿಲ್ ಗುಮಾಸ್ತೆ, ಸ್ನೇಹ, ಮಂಜುಳಾ, ಶ್ರೀಕಾಂತ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಹರೀಶ, ಕುಮಾರ ಸ್ವಾಮಿ, ಡಿವೈಎಸ್‍ಪಿ ಶಾಂತವೀರ ಸೇರಿದಂತೆ ಜಿಲ್ಲೆಯ ವಿವಿಧ ಠಾಣೆಗಳ ಸಿಪಿಐಗಳು, ಪಿಎಸ್‍ಐಗಳು, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.