ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗದ ರೈತರಿಗೆ ನೀರು ಸಿಗುತ್ತಿಲ್ಲ. ಹೀಗಿರುವಾಗ ಜಿಲ್ಲಾಧಿಕಾರಿಗಳ ಉಪಕಾಲುವೆ ಕುರಿತ ಆದೇಶವನ್ನು ವಿರೋಧಿಸಿ ಸಿಂಧನೂರು ಮೇಲ್ಭಾಗದಲ್ಲಿ ನೀರಿನ ವಿಷಯದಲ್ಲಿ ಪಕ್ಷಾತೀತವಾಗಿ ಒಂದಾಗಿ ಅಡ್ಡಿಪಡಿಸುವುದು ಸರಿಯಲ್ಲ ಎಂದು ರಾಯಚೂರು ಗ್ರಾಮೀಣ ಶಾಸಕ ದದ್ದಲ್ ಬಸನಗೌಡ ಹೇಳಿದರು.

ತಮ್ಮನ್ನು ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಲುವೆಯ ಕೆಳಭಾಗದಲ್ಲಿರುವವರೂ ರೈತರೇ. ಯಾರಿಗೂ ಅನ್ಯಾಯವಾಗಬಾರದು. ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಚಿವ ವೆಂಕಟರಾವ್ ನಾಡಗೌಡ ಹಾಗೂ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಅವರು ಪಕ್ಷಾತೀತವಾಗಿ ಜಿಲ್ಲಾಡಳಿತದ ಆದೇಶವನ್ನು ತಿರಸ್ಕರಿಸಿ ಕೆಳಭಾಗಕ್ಕೆ ನೀರು ಹರಿಸಲು ಅಡ್ಡಿಪಡಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಬಾರಿ ಭೀಕರ ಬರಗಾಲ ಎದುರಾಗಿದ್ದು, ಎಲ್ಲೆಡೆ ನೀರಿನ ಕೊರತೆ ಇದೆ. ಲಭ್ಯವಿರುವ ನೀರನ್ನು ಹಂಚಿಕೊಂಡು ಬಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಮರ್ಪಕವಾಗಿ ನೀರು ಹಂಚಿಕೆ ಮಾಡುವ ಕುರಿತು ಆದೇಶಿಸಿದೆ. ಆದರೆ ಮೇಲ್ಭಾಗದಲ್ಲಿ ಪಕ್ಷಾತೀತವಾಗಿ ಒಂದಾಗಿ ಜಿಲ್ಲಾಧಿಕಾರಿ ಆದೇಶ ಜಾರಿಗೆ ಅಡ್ಡಿಪಡಿಸಿರುವುದು ಸರಿಯಲ್ಲ. ಕೆಳಭಾಗದ ರೈತರಿಗೂ ನೀರು ಅಗತ್ಯವಿದೆ. ಹತ್ತಿ ಬೆಳೆ ಸಂಪೂರ್ಣ ಹಾಳಾಗಿದ್ದು, ಕನಿಷ್ಠ ಮೆಣಸಿನಕಾಯಿ ಬೆಳೆಗಾದರೂ ನೀರು ಹರಿಸಬೇಕಿದೆ ಎಂದು ಹೇಳಿದರು.

ಮೇಲ್ಭಾಗದ ರೈತರ ಪರವಾಗಿ ಅಲ್ಲಿನ ನಾಯಕರು ಪಕ್ಷಾತೀತವಾಗಿ ಒಂದಾಗಿರುವಂತೆ, ಕೆಳಭಾಗದ ನಾಯಕರೂ ಪಕ್ಷಾತೀತವಾಗಿ ಒಂದಾಗಿ ಕೆಳಭಾಗದ ರೈತರಿಗಾಗಿ ಹೋರಾಟ ಕೈಗೊಂಡರೆ ಸಮಸ್ಯೆ ಬಗೆಹರಿಯುತ್ತದೆಯೇ? ನಾವು ಕೂಡ ಜಿಲ್ಲಾಮಟ್ಟದ ಹೆದ್ದಾರಿಗಳನ್ನು ಬಂದ್ ಮಾಡಿ ಹೋರಾಟ ನಡೆಸಿದರೆ ಹೇಗಿರುತ್ತದೆ ಎಂದು ದದ್ದಲ ಬಸನಗೌಡ ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor