ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಯ ಸಿಂಧನೂರು ತಾಲೂಕು ವ್ಯಾಪ್ತಿಯ 36ನೇ ಉಪಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರು ಹರಿಸುವಂತೆ ಆಗ್ರಹಿಸಿ ನಗರದ ಗಾಂಧಿ ವೃತ್ತದಲ್ಲಿ ಮುಖ್ಯ ಹೆದ್ದಾರಿ ತಡೆದು ಸಾವಿರಾರು ರೈತರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಲಿಂಗಸುಗೂರು ಸಹಾಯಕ ಆಯುಕ್ತರ ನೇತೃತ್ವದಲ್ಲಿ ಶುಕ್ರವಾರ ತಡರಾತ್ರಿಯಿಂದಲೇ 36ನೇ ಉಪಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ಎಡದಂಡೆ ಮುಖ್ಯ ಕಾಲುವೆ ವ್ಯಾಪ್ತಿಯಲ್ಲಿ 144ನೇ ಸೆಕ್ಷನ್ ಜಾರಿಗೊಳಿಸಿ, ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

ಈ ಹಿಂದೆ ಜಿಲ್ಲಾಧಿಕಾರಿಗಳ ಆದೇಶವನ್ನು ವಿರೋಧಿಸಿ ಶಾಸಕರು, ಮಾಜಿ ಸಂಸದರು ಹಾಗೂ ಮಾಜಿ ಸಚಿವರು ರೈತರೊಂದಿಗೆ ಕಾಲುವೆ ಬಳಿ ಹೋರಾಟ ನಡೆಸಿ, ನೀರು ಸ್ಥಗಿತಗೊಳಿಸದಂತೆ ಆಗ್ರಹಿಸಿದ್ದರು. ಇದೀಗ ಏಕಾಏಕಿ ಶುಕ್ರವಾರ ತಡರಾತ್ರಿ ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿರುವುದರಿಂದ ರೈತರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನೀರು ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಶನಿವಾರ ನಗರದ ಗಾಂಧಿ ವೃತ್ತದಲ್ಲಿ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ್ ನಾಡಗೌಡ ಹಾಗೂ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಸಾವಿರಾರು ರೈತರು ಪ್ರತಿಭಟನೆ ನಡೆಸಲು ಮುಂದಾದರು. ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿದ ಪ್ರತಿಭಟನಾಕಾರರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಗಂಗಾವತಿ, ಕುಷ್ಟಗಿ ಹಾಗೂ ರಾಯಚೂರು ಮುಖ್ಯರಸ್ತೆಗಳಲ್ಲಿ ರಸ್ತೆ ತಡೆ ನಡೆಸಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.

ಘಟನೆಯ ಹಿನ್ನೆಲೆಯಲ್ಲಿ ಶನಿವಾರ ತಾಲೂಕಿನ 36ನೇ ವ್ಯಾಪ್ತಿಯ ಕಾಲುವೆ ಬಳಿ ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ ನೇತೃತ್ವದಲ್ಲಿ ನೂರಾರು ರೈತರು ಕಾಲುವೆ ಬಂದ್ ಮಾಡಿರುವುದನ್ನು ತೆರವುಗೊಳಿಸಲು ಮುಂದಾದಾಗ, ಪ್ರತಿಭಟನಾನಿರತ ರೈತರನ್ನು ಪೊಲೀಸರು ಬಂಧಿಸಿ ತುರ್ವಿಹಾಳ ಠಾಣೆಗೆ ಕರೆದೊಯ್ದರು.

ಸ್ಥಳದಲ್ಲಿದ್ದ ಲಿಂಗಸುಗೂರು ಸಹಾಯಕ ಆಯುಕ್ತರು ಹಾಗೂ ರೈತ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಲಕಾಲ ಪರಿಸ್ಥಿತಿ ಉದ್ವಿಗ್ನಗೊಂಡಿತು.

ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಉಪಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದ್ದು, ಲಿಂಗಸುಗೂರು ಸಹಾಯಕ ಆಯುಕ್ತ ಹಾಗೂ ಡಿವೈಎಸ್‌ಪಿ ಚಂದ್ರಶೇಖರ ನೇತೃತ್ವದಲ್ಲಿ ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.

ಸಿಪಿಐ, ಪಿಎಸ್‌ಐ ಸೇರಿದಂತೆ 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಪ್ರದೇಶದಲ್ಲಿ ಬೂದಿಮುಚ್ಚಿದ ಕೆಂಡದಂತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor