ರಾಯಚೂರು: ಸ್ವಚ್ಛ ಭಾರತ್ ಮಿಷನ್ ಯೋಜನೆ (ಗ್ರಾಮೀಣ) ಅಡಿಯಲ್ಲಿ ನಡೆದಿರುವ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಒ ಹಾಗೂ ಕೆಳಹಂತದ ಅಧಿಕಾರಿಗಳನ್ನು ಮಾತ್ರ ಹೊಣೆ ಮಾಡದೆ, ಮೇಲ್ವಿಚಾರಣೆಯ ಜವಾಬ್ದಾರಿ ಹೊತ್ತಿರುವ ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ್ ಕುಮಾರ್ ಕಾಂದೂ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಭೀಮ್ ಆರ್ಮಿ ಜಿಲ್ಲಾ ಘಟಕದ ವತಿಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ರಾಜ್ಯ ಆಯುಕ್ತರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ಸುಮಾರು 179 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಅಂದಾಜು 1,406 ಜನವಸತಿ ಗ್ರಾಮಗಳಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಅನುಷ್ಠಾನದ ಕುರಿತು ಸಮರ್ಪಕ ಮೇಲ್ವಿಚಾರಣೆ ನಡೆಸಬೇಕು. ಪಂಚಾಯಿತಿ ಮಟ್ಟದ ಲೋಪದೋಷಗಳನ್ನು ಸರಿಯಾಗಿ ಪರಿಶೀಲಿಸಿದ್ದರೆ ಅಶ್ವಿನಿ ಕೊಲೆಯಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಿಇಒ ಅವರಿಂದ ಕರ್ತವ್ಯಲೋಪವಾಗಿದೆ ಎಂದು ಸಂಘಟನೆಯ ಮುಖಂಡರು ಆರೋಪಿಸಿದರು.

ವೈಯಕ್ತಿಕ ಶೌಚಾಲಯ ನಿರ್ಮಾಣ, ಬಯಲು ಶೌಚಮುಕ್ತ ಪ್ರದೇಶ (ಒಡಿಎಫ್) ಹಾಗೂ ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ (ಎಸ್‌ಬಿಎಂ) ಸೇರಿದಂತೆ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ ಅವರು, ಪಂಚಾಯಿತಿ ಮಟ್ಟದಲ್ಲಿ ನಡೆಯುವ ಎಲ್ಲ ಕಾರ್ಯಗಳ ಮೇಲ್ವಿಚಾರಣೆ ಜಿಲ್ಲಾ ಪಂಚಾಯಿತಿ ಸಿಇಒ ಅವರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದ ಅಶ್ವಿನಿ ಎಂಬ ದಲಿತ ಸಮುದಾಯದ ಯುವತಿಯ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಬಯಲು ಬಹಿರ್ದೆಸೆಯೇ ಕಾರಣವಾಗಿದೆ ಎಂದು ಆರೋಪಿಸಿದರು. ಹೊಕ್ರಾಣಿ ಗ್ರಾಮವನ್ನು ಬಯಲು ಶೌಚಮುಕ್ತ ಗ್ರಾಮವೆಂದು ಘೋಷಿಸಲಾಗಿತ್ತು. ಸಿಇಒ ಅವರು ಬೋಗಸ್ ಆಗಿ ಗ್ರಾಮವನ್ನು ಬಯಲು ಶೌಚಮುಕ್ತ ಮಾದರಿ 5 ಸ್ಟಾರ್ ಗ್ರಾಮವೆಂದು ಘೋಷಿಸಿದ್ದಾರೆ ಎಂದು ಆರೋಪಿಸಿದ ಅವರು, ಈ ಪ್ರಕರಣದಲ್ಲಿ ಕೆಳಹಂತದ ಸಿಬ್ಬಂದಿಯನ್ನು ಮಾತ್ರ ಹೊಣೆ ಮಾಡದೆ, ಮೇಲ್ವಿಚಾರಣಾ ಅಧಿಕಾರಿಯಾಗಿರುವ ಜಿಪಂ ಸಿಇಒ ಅವರನ್ನೂ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಕೂಡಲೇ ಜಿಪಂ ಸಿಇಒ ವಿರುದ್ಧ ಎಸ್‌ಸಿ-ಎಸ್‌ಟಿ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಸೇವೆಯಿಂದ ಅಮಾನತುಗೊಳಿಸಬೇಕು ಹಾಗೂ ಅವರ ಲಾಗಿನ್‌ಗಳ ಆಡಿಟ್ ನಡೆಸಬೇಕು. ಜಿಲ್ಲೆಯ ಎಲ್ಲ ಒಡಿಎಫ್ ಹಾಗೂ ಎಸ್‌ಬಿಎಂ ಮಾದರಿ ಗ್ರಾಮಗಳ ಕುರಿತು ಎಸ್‌ಐಟಿ ತನಿಖೆ ನಡೆಸಬೇಕು. ಹೊಕ್ರಾಣಿ ಗ್ರಾಮದ ಬೋಗಸ್ ಮಾದರಿ ಘೋಷಣೆಯನ್ನು ರದ್ದುಪಡಿಸಿ, ಎಲ್ಲ ಪರಿಶಿಷ್ಟ ಜಾತಿ ಕುಟುಂಬಗಳಿಗೆ ತಕ್ಷಣ ವೈಯಕ್ತಿಕ ಶೌಚಾಲಯ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಭೀಮ್ ಆರ್ಮಿಯ ಜಿಲ್ಲಾಧ್ಯಕ್ಷ ಪ್ರವೀಣ ಕುಮಾರ್, ಉಪಾಧ್ಯಕ್ಷ ಜಯರಾಜ್ ಹಾಗೂ ಕಾರ್ಯದರ್ಶಿ ರಘು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor