Raichur | ಯೋಜನಾ ವಿಭಾಗದ ಇಇಗೆ ಕುಡಿಯುವ ನೀರು ವಿಭಾಗದ ಹೆಚ್ಚುವರಿ ಹೊಣೆ ಆರೋಪ : ಸಿಇಒ ವಿರುದ್ಧ ದೂರು
ರಾಯಚೂರು: ರಾಯಚೂರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರ ಹೆಚ್ಚುವರಿ ಪ್ರಭಾರವನ್ನು ಯೋಜನಾ ವಿಭಾಗದ (ಪಿಎಂಜಿಎಸ್‌ಐ) ಕಾರ್ಯಪಾಲಕ ಅಭಿಯಂತರರಿಗೆ ನಿಯಮಬಾಹಿರವಾಗಿ ಜಿಲ್ಲಾ ಪಂಚಾಯತ್ ಸಿಇಒ ಅವರು ವಹಿಸಿದ್ದಾರೆ ಎಂದು ದೂರು ನೀಡಲಾಗಿದೆ.
ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ಯೋಜನಾ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಮೇನಕಾ ಪಾಟೀಲ ಅವರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ್ ಕುಮಾರ್ ಕಾಂದೂ ಅವರು ಸೆ.18ರಂದು ವಹಿಸಿಕೊಂಡು ಕಾರ್ಯನಿರ್ವಹಿಸುವಂತೆ ಆದೇಶ ಹೊರಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆದರೆ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ (ಕೆಆರ್‌ಆರ್‌ಡಿಎ) ಅಧೀನದ ಯೋಜನಾ ವಿಭಾಗದ ಕಲ್ಯಾಣ ಕರ್ನಾಟಕ ಪಥ, ಕೆಕೆಆರ್‌ಡಿಬಿ, ಎಸ್‌ಡಿಪಿ ಸೇರಿದಂತೆ ವಿವಿಧ ಕಾಮಗಾರಿಗಳ ಭೌತಿಕ ಹಾಗೂ ಆರ್ಥಿಕ ಪ್ರಗತಿ ಮತ್ತು ಆಡಳಿತಾತ್ಮಕ ಕಾರ್ಯಗಳಿಗೆ ಇದರಿಂದ ನೇರ ಅಡಚಣೆಯಾಗಲಿದೆ ಎಂದು ದಲಿತ ಸೇನೆಯ ಜಿಲ್ಲಾಧ್ಯಕ್ಷ ಮಾರುತಿ ಕಮ್ತೋಳ್ ಬೆಂಗಳೂರಿನ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯಾಚರಣೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಕೆಕೆಆರ್‌ಡಿಎ ಯೋಜನಾ ವಿಭಾಗವು ರಾಜ್ಯ ಮಟ್ಟದ ಸೊಸೈಟಿಯಾಗಿದ್ದು, ಇದರ ಆಡಳಿತಾತ್ಮಕ ನಿಯಂತ್ರಣ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿರುತ್ತದೆ. ಆದರೆ ರಾಯಚೂರು ಜಿ.ಪಂ. ಸಿಇಒ ಅವರು ಯೋಜನಾ ವಿಭಾಗದಲ್ಲಿ ಹಸ್ತಕ್ಷೇಪ ಹಾಗೂ ನಿಯಂತ್ರಣ ಸಾಧಿಸಲು ಮುಂದಾಗಿರುವುದು ನಿಯಮಬಾಹಿರವಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಕೆಕೆಆರ್‌ಡಿಎ ಯೋಜನಾ ವಿಭಾಗದ ಅಧಿಕಾರಿಗಳಿಗೆ ಇಲಾಖೆಯೇತರ ಹೆಚ್ಚುವರಿ ಪ್ರಭಾರ ನೀಡುವುದು ಕೆಸಿಎಸ್‌ಆರ್ ಹಾಗೂ ಕೆಆರ್‌ಆರ್‌ಡಿಎ ನಿಯಮಗಳ ಪ್ರಕಾರ ಸರಿಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಒಂದು ವೇಳೆ ಪೂರ್ವಾನುಮತಿ ಇಲ್ಲದೆ ಜಿ.ಪಂ. ಸಿಇಒ ಅವರು ಇಲಾಖೆಯೇತರ ವಿಭಾಗದ ಪ್ರಭಾರ ವಹಿಸುವಂತೆ ಆದೇಶ ನೀಡಿದ್ದರೆ, ಅಂತಹ ಆದೇಶ ಪಾಲಿಸದಂತೆ ಯೋಜನಾ ವಿಭಾಗದ ಎಲ್ಲ ಕಾರ್ಯಪಾಲಕ ಅಭಿಯಂತರರಿಗೆ ಸ್ಪಷ್ಟ ಸುತ್ತೋಲೆ ಹೊರಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.