×
Ad

ರಾಯಚೂರು | ಯರಮರಸ್ ವಿಮಾನ ನಿಲ್ದಾಣದ ಕುರಿತು ಸಾರ್ವಜನಿಕರ ಅಹವಾಲು ಸಭೆ

Update: 2025-02-12 21:16 IST

ರಾಯಚೂರು : ನಗರದ ಹೊರವಲಯದ ಯರಮರಸ್ ಬಳಿ ವಿಮಾನ ನಿಲ್ದಾಣ ನಿರ್ಮಾಣದ ಸುತ್ತಮುತ್ತಲಿನ ಪರಿಸರ ಸಂರಕ್ಷಣೆಗೆ 13 ಕೋಟಿ ರೂ. ಮೀಸಲಿಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತಿಶ್ ಕೆ. ತಿಳಿಸಿದರು

ನಗರದ ಯರಮರಸ್ ಸರ್ಕ್ಯೂಟ್ ಹೌಸ್ ನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಸಹಯೋಗದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ರಾಯಚೂರು ತಾಲೂಕಿನ ಏಗನೂರು, ಯರಮರಸ್, ದಂಡ್ ಗ್ರಾಮಗಳ 130.43 ಹೆಕ್ಟರ್ ಪ್ರದೇಶದಲ್ಲಿ ಗ್ರೀನ್ ಫೀಲ್ಡ್ ನೋ ಫ್ರೀಲ್ ವಿಮಾನ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲು ಉದ್ದೇಶಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಪರಿಸರ ಸಂರಕ್ಷಣೆ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ವಿಮಾನ ನಿಲ್ದಾಣವು 322.3 ಎಕರೆಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ, ವಿಮಾನ ನಿಲ್ದಾಣಕ್ಕೆ ಈಗಾಗಲೇ ಸಿದ್ಧತೆ ಕೈಗೊಳ್ಳುತ್ತಿದ್ದು, ಮುಂಚಿತವಾಗಿ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆರೆಗಳು ಮತ್ತು ಹಳ್ಳ-ಕೊಳ್ಳಗಳ ರಕ್ಷಣೆ ಬಗ್ಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.

ಏಗನೂರು ನಿವಾಸಿ ಹನುಮೇಶ ಮಾತನಾಡಿ, ವಿಮಾನ ನಿಲ್ದಾಣ ಮಾಡುವ ಮೊದಲು ಅಲ್ಲಿ 108 ಕುಟುಂಬಗಳು ವಾಸ ಮಾಡುತ್ತಿದ್ದು, ಈ ಹಿಂದೆ ಸರ್ಕಾರವೇ ಹಕ್ಕುಪತ್ರ ನೀಡಿ ಮನೆಗಳನ್ನು ನಿರ್ಮಿಸಿದೆ. ಆದರೆ ಸ್ಥಳಾಂತರ ಮಾಡಬೇಕು. ಮೂಲಭೂತಸೌಕರ್ಯ ಒದಗಿಸಿ ಮನೆಗಳನ್ನು ನಿರ್ಮಿಸಬೇಕು. ವಿಮಾನ ನಿಲ್ದಾಣದ ಸ್ಥಳದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಹಾದು ಹೋಗಿದೆ. ಅಲ್ಲಿಯೇ ರನ್ವೇ ನಿರ್ಮಿಸಲಾಗುತ್ತಿದ್ದು ಕೂಡಲೇ ರನ್ವೇ ಮಾರ್ಗ ಬದಲಿಸಬೇಕೆಂದರು.

ಹೋರಾಟಗಾರ ಬಸವರಾಜ ಕಳಸ ಮಾತನಾಡಿ, ಯರಮರಸ್ ಬಳಿ 68 ವರ್ಷಗಳ ಹಿಂದೆ ನೆಹರು ಅವರು ತುರ್ತು ಭೂ ಸ್ಪರ್ಶ ಮಾಡಿ ಪ್ರಾಣ ಉಳಿಸಿದ ಪ್ರದೇಶವಾಗಿದ್ದು, ಅನೇಕ ಕಡೆ ವಿಮಾನ ನಿಲ್ದಾಣ ಗಳಾಗಿವೆ, ಆದರೆ ಇಲ್ಲಿ ಆಗಲಿಲ್ಲ, ಅಂದಿನ ಪ್ರಧಾನಿಗಳಾಗಿದ್ದ ನೆಹರು ಅವರು ವಿಮಾನ ನಿಲ್ದಾಣ ಮಾಡಲು ಅಧ್ಯತೆ ನೀಡಿದ್ದು, ನಂತರ ಇಂದಿರಾಗಾಂಧಿ ಅವರು ಜಿಲ್ಲೆಗೆ ಆಗಮಿಸಿದಾಗ ವಿಮಾನ ನಿಲ್ದಾಣ ನಿರ್ಮಾಣ ಭರವಸೆ ನೀಡಿದ್ದರು, ಅಂದಿನಿಂದ ಇಂದಿನವರೆಗೂ ಆಗಿಲ್ಲ. 68 ವರ್ಷಗಳ ವಿಮಾನ ನಿಲ್ದಾಣ ಆಗಿದೆ, ಸಾದಕ ಬಾದಕಗಳನ್ನು ಆಲಿಸಬೇಕಾಗಿದೆ ಎಂದು ಒತ್ತಾಯಿಸಿದರು.

ಏಗನೂರು ಗ್ರಾಮಸ್ಥರು ವಿಮಾನ ನಿಲ್ದಾಣಕ್ಕೆ ನೆಹರು ಹೆಸರು ಇಡಲು ವಿರೋಧಿಸಿ ಏಗನೂರು ಅಥವಾ ರಾಯಚೂರು ಹೆಸರಿಡಬೇಕೆಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ಕೆ.ಶಾಂತಪ್ಪ ಮಾತನಾಡಿ, ವಿಮಾನ ನಿಲ್ದಾಣದಿಂದಾಗುವ ಸಾಧಕ ಬಾದಕಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ವಿಮಾನ ನಿಲ್ದಾಣದಿಂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತದೆ, ವಿಮಾನದಲ್ಲಿ ಪ್ರಯಾಣಿಕರು ಹೆಚ್ಚಳಕ್ಕೆ ಈ ಭಾಗದಲ್ಲಿ ಇಂಡಸ್ಟ್ರಿಗಳು ಅಭಿವೃದ್ಧಿಗಳಾಗಬೇಕು. ಆರ್ಟಿಪಿಎಸ್, ವೈಟಿಪಿಎಸ್ ನಿಂದ ತಾಪಮಾನ ಹೆಚ್ಚಿದೆ. ಪರಿಸರ ಸಂರಕ್ಷಣೆ ಮಾಡುತ್ತೇವೆಂದು ಮಾಡಿಲ್ಲ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಜವಾಬ್ದಾರಿಯುತವಾಗಿ ತಮ್ಮ ಕೆಲಸ ನಿರ್ವಹಣೆ ಮಾಡಬೇಕು. ಪರಿಸರ ಸಂರಕ್ಷಣೆ ಅನುದಾನ ಮೀಸಲಿಟ್ಟ ಕೆಲಸ ಮಾಡಬೇಕು ಎಂದರು.

ಸಭೆಯಲ್ಲಿ ಸಹಾಯಕ ಆಯುಕ್ತ ಗಜಾನನ ಬಾಳೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಪ್ರಕಾಶ, ತಹಶೀಲ್ದಾರ್ ಸುರೇಶ ವರ್ಮಾ, ರಘುವೀರ್ ನಾಯಕ, ಸುತ್ತಮುತ್ತಲಿನ ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳು ಮುಖಂಡರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News