×
Ad

ರಾಯಚೂರು | ಸಹಾಯಕ ಆಯುಕ್ತರ ನೇತೃತ್ವದಲ್ಲಿ 11 ಖಾಸಗಿ ಆಸ್ಪತ್ರೆಗಳ ಮೇಲೆ ದಿಢೀರ್ ದಾಳಿ : ಪರಿಶೀಲನೆ

Update: 2025-09-10 19:56 IST

ರಾಯಚೂರು : ರಾಯಚೂರಿನ ಎಲ್‌ಬಿಎಸ್ ನಗರ ಸೇರಿದಂತೆ ಇತರೆಡೆ ಇರುವ ಖಾಸಗಿ ಆಸ್ಪತ್ರೆಗಳ ಮೇಲೆ, ರಾಯಚೂರು ಸಹಾಯಕ ಆಯುಕ್ತರಾದ ಗಜಾನನ ಬಾಳೆ ಅವರ ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದರು.

ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಶಬಾಬು ಅವರು ಮಾತನಾಡಿ, ಸೆ.10ರಂದು 11 ಖಾಸಗಿ ಆಸ್ಪತ್ರೆಗಳ ಮೇಲೆ ದಾಳಿ ಮಾಡಲಾಗಿದೆ. 11 ಆಸ್ಪತ್ರೆಗಳ ಪೈಕಿ ಕೆಲವು ಆಸ್ಪತ್ರೆಗಳು ಕೆಪಿಎಂಸಿ ಕಾಯಿದೆಯನುಸಾರ ನೋಂದಣಿ ಮಾಡದೇ ಇರುವುದು ಕಂಡು ಬಂದಿದ್ದು, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ಖಾಸಗಿ ನರ್ಸಿಂಗ್ ನಿಯಂತ್ರಣ ಕಾಯಿದೆ (ಕೆಪಿಎಂಇ) ನಿಯಮಗಳು ಉಲ್ಲಂಘಿಸಿದ ಖಾಸಗಿ ವೈದ್ಯಕೀಯ ಸಂಸ್ಥೆ, ಕ್ಲಿನಿಕ್‌ಗಳ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ನಕಲಿ ವೈದ್ಯರ ಜಾಲದ ಮೇಲೆ ನಿಗಾ ಇರಿಸಿದ್ದು, ಈ ಕೆಟ್ಟ ಪದ್ಧತಿಯನ್ನು ಬೇರುಸಮೇತ ಕಿತ್ತೊಗೆಯಲು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಗ್ಯ ಇಲಾಖೆಯು ಮುಂದಾಗಿದೆ ಎಂದರು.

ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ತಮ್ಮ ಕೆಪಿಎಂಇ ನೋಂದಣಿ ಸಂಖ್ಯೆ, ಆಸ್ಪತ್ರೆಯ ಹೆಸರು ಮತ್ತು ಮಾಲಕರ ಹೆಸರನ್ನು ಕಟ್ಟಡದ ಮುಂಭಾಗದಲ್ಲಿ ಕಡ್ಡಾಯ ಪ್ರದರ್ಶಿಸಬೇಕು. ಈ ಬಗ್ಗೆ ಭೇಟಿ ವೇಳೆ ಆಯಾ ಆಸ್ಪತ್ರೆಯ ಮಾಲಕರು ಮತ್ತು ಸಿಬ್ಬಂದಿಗೆ ಸೂಚಿಸಲಾಗಿದೆ ಎಂದರು.

ಕೆಪಿಎಂಇ ಕಾಯ್ದೆಯನುಸಾರ ಸಾರ್ವಜನಿಕರ ಮಾಹಿತಿಗಾಗಿ ಆಸ್ಪತ್ರೆಯಲ್ಲಿ ಲಭ್ಯವಿರುವ ಸೇವೆಗಳ ವಿವರವನ್ನು ಆಸ್ಪತ್ರೆಯ ಆವರಣದ ಪ್ರಮುಖ ಸ್ಥಳಗಳಲ್ಲಿ ಸ್ಪಷ್ಟವಾಗಿ ಪ್ರದರ್ಶಿಸಬೇಕು. ದಿಢೀರ್ ಭೇಟಿ ವೇಳೆ ಈ ಬಗ್ಗೆ ಪರಿಶೀಲಿಸಲಾಗಿದೆ. ಇಂತಹ ಮಾರ್ಗಸೂಚಿ ಅಂಶಗಳನ್ನು ಕಡ್ಡಾಯ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಡಿಎಚ್‌ಓ ಅವರು ತಿಳಿಸಿದರು.

ಈ ವೇಳೆ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವುಕುಮಾರ್, ಐಎಮ್‌ಎ ಸದಸ್ಯರಾದ ಡಾ.ಹರ್ಷ ಪಾಟೀಲ್, ಆಯುಷ್ ಇಲಾಖೆಯ ಅಧಿಕಾರಿ ಡಾ.ಶಂಕರಗೌಡ ಎಸ್.ಪಾಟೀಲ್ ಸೇರಿದಂತೆ ರಾಯಚೂರು ಮಹಾನಗರ ಪಾಲಿಕೆಯ ವಿವಿಧ ಅಧಿಕಾರಿಗಳು ಇದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News