ರಾಯಚೂರು | ಜಿಲ್ಲೆಯಲ್ಲಿ ಆರೋಗ್ಯ ಆಯುಕ್ತಾಲಯ ಕಚೇರಿ ಸ್ಥಾಪಿಸುವ ಉದ್ದೇಶವಿದೆ : ಅಜಯ್ ಸಿಂಗ್
ರಾಯಚೂರು : ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಪ್ರತಿ ವರ್ಷವೂ ಸರ್ಕಾರದಿಂದ 5 ಸಾವಿರ ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತಿದ್ದು, ಇದೊಂದು ಐತಿಹಾಸಿಕ ಘೋಷಣೆಯಾಗಿದೆ. ಮುಂದಿನ ದಿನಗಳಲ್ಲಿ ರಾಯಚೂರು ಜಿಲ್ಲೆಯಲ್ಲಿ ಆರೋಗ್ಯ ಆಯುಕ್ತಾಲಯ ಕಚೇರಿ ಸ್ಥಾಪಿಸುವ ಉದ್ದೇಶವಿದೆ ಎಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯ್ ಸಿಂಗ್ ಹೇಳಿದರು.
ಅವರಿಂದು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಿಡಲಾದ ಅನುದಾನ ಬಳಕೆಯಾಗುವುದಿಲ್ಲ ಎಂಬ ಆಪಾದನೆ ಇತ್ತು. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ನಂತರ ಮೊದಲ ಬಾರಿಗೆ 2009 ಕೋಟಿ ರೂ. ಅನುದಾನವನ್ನು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಖರ್ಚು ಮಾಡಲಾಗಿದೆ. ಪ್ರಸ್ತುತ ವರ್ಷದಲ್ಲಿ 3 ಸಾವಿರ ಕೋಟಿ ರೂ. ಅನುದಾನ ಕೆಕೆಆರ್‌ಡಿಬಿ ಅನುದಾನ ಖರ್ಚಾಗಲಿದೆ ಎಂದು ಹೇಳಿದರು.
2023-24 ಹಾಗೂ 2024-25ನೇ ವರ್ಷವನ್ನು ಶೈಕ್ಷಣಿಕ ವರ್ಷವೆಂದು ಘೋಷಣೆ ಮಾಡಲಾಗಿದ್ದು, ಕೆಕೆಆರ್‌ಡಿಬಿ ಅನುದಾನದಲ್ಲಿ ಶೇ.25ರಷ್ಟು ಹಣವನ್ನು ಈ ಭಾಗದ ಶಿಕ್ಷಣಕ್ಕಾಗಿ ಮೀಸಲಿರಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಕ್ಷರ ಅವಿಷ್ಕಾರ ಯೋಜನೆಯಡಿ 200 ಹೊಸ ಶಾಲೆಗಳನ್ನು ಕಟ್ಟಿಸಲಾಗುತ್ತದೆ. ಶಿಕ್ಷಣ ಇಲಾಖೆಯಿಂದ ನೂರು ಹಾಗೂ ಕೆಕೆಆರ್‌ಡಿಬಿಯಿಂದ ನೂರು ಶಾಲೆಗಳನ್ನು ಪ್ರತಿ ಎರಡು ಗ್ರಾ.ಪಂ ನಡುವೆ ಒಂದು ಶಾಲೆಯನ್ನು ಸ್ಥಾಪನೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಹೇಳಿದರು.
ಆರೋಗ್ಯ ಅವಿಷ್ಕಾರ ಯೋಜನೆಯಡಿ ಮುಂದಿನ ಎರಡುವರ್ಷದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು 857 ಕೋಟಿ ರೂ. ಮೀಸಲಿಡಲಾಗಿದೆ. ಈಗಾಗಲೇ 440 ಕೋಟಿ ವೆಚ್ಚದಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಆರೋಗ್ಯ ಸೌಲಭ್ಯಗಳು, ಆಂಬುಲೆನ್ಸ್ ಸೇವೆಗಳನ್ನು ನೀಡುವ ಉದ್ದೇಶವಿದೆ ಎಂದು ಹೇಳಿದರು.
ಇದಲ್ಲದೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಇತರೆ ಸಮುದಾಯಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ವಸತಿನಿಲಯಗಳನ್ನು ಸ್ಥಾಪಿಸಲಾಗುತ್ತಿದೆ. 8.60 ಕೋಟಿ ರೂ, ವೆಚ್ಚದಲ್ಲಿ 18 ಹೊಸ ತಾಲೂಕುಗಳು ಸೇರಿ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಉಪಸ್ಥಿತರಿದ್ದರು.