ರಾಯಚೂರು | ವಿವಿಧ ವಸತಿ ಶಾಲೆ ಪ್ರವೇಶ ಪರೀಕ್ಷೆಯ ಪೂರ್ವಭಾವಿ ಸಭೆ
ರಾಯಚೂರು : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯಲ್ಲಿನ ವಸತಿ ಶಾಲೆಗಳ ಪ್ರವೇಶಕ್ಕೆ ಫೆ.15ರಂದು ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದ್ದು, ಯಾವುದೇ ಲೋಪದೋಷಗಳಾಗದಂತೆ ವ್ಯವಸ್ಥಿತವಾಗಿ ಪರೀಕ್ಷೆ ಜರುಗಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಫೆ.13ರ ಗುರುವಾರ ದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಣದಲ್ಲಿ ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ಹಿನ್ನಲೆಯ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದ ಸೂಚನೆಯಂತೆ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಸಿಇಟಿ ಮಾದರಿಯಲ್ಲಿ ಪ್ರವೇಶ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕ್ರಮ ಕೈಗೊಂಡಿದೆ. ಜಿಲ್ಲೆಯಲ್ಲಿ 49 ಪರೀಕ್ಷೆ ಕೇಂದ್ರದಲ್ಲಿ ಒಟ್ಟು 15,147 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಪರೀಕ್ಷೆಯನ್ನು ಸುರಕ್ಷತಾ ಕ್ರಮಗಳೊಂದಿಗೆ ಅಚ್ಚುಕಟ್ಟಾಗಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಡಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾ ಗಾಂದಿ, ಡಾ.ಬಿ.ಆರ್.ಅಂಬೇಡ್ಕರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಸಂಗೊಳ್ಳಿ ರಾಯಣ್ಣ, ಕವಿರನ್ನ, ಗಾಂಧಿತತ್ವ, ಶ್ರೀ ನಾರಾಯಣ ಗುರು ಮುಂತಾದ ವಸತಿ ಶಾಲೆಗಳಲ್ಲಿ ಹಾಗು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿಗೆ ಮೆರಿಟ್ ಆಧಾರದ ಮೇಲೆ ಪ್ರವೇಶಾತಿಯನ್ನು ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಪ್ರವೇಶ ಪರೀಕ್ಷೆಯನ್ನು ಫೆ.15ರ ಶನಿವಾರ ಮಧ್ಯಾಹ್ನ 2.30ರಿಂದ ಮಧ್ಯಾಹ್ನ 4.30ರವರೆಗೆ ನಡೆಸಲಾಗುತ್ತಿದ್ದು, ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು. ಅಲ್ಲದೆ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಕಟ್ಟುನಿಟ್ಟಾಗಿ ನಿಯಮಗಳಲ್ಲಿ ಪಾಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪ ನಿರ್ದೇಶಕರಾದ ರಂಗಪ್ಪ, ಇಲಾಖೆಯ ಹಿರಿಯ ಅಧಿಕಾರಿ ಸೋಮಶೇಖರಪ್ಪ ಹೋಕ್ರಣಿ, ಎಂ.ಸುಧಾ ಸೇರಿದಂತೆ ಇತರರು ಇದ್ದರು.