ರಾಯಚೂರು ಜಿಲ್ಲೆಯ ವಿವಿಧೆಡೆ ನಾಲ್ಕು ದಿನಗಳ ಕಾಲ ಮಳೆ ಸಾಧ್ಯತೆ
ರಾಯಚೂರು : ಜಿಲ್ಲೆಯಲ್ಲಿ ಮೇ 15ರಿಂದ 18 ರವರೆಗೆ ಸಾಧಾರಣವಾಗಿ ಹಾಗೂ ಕೆಲವೆಡೆ ಧಾರಾಕಾರ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ತಿಳಿಸಲಾಗಿದೆ.
ಮಂಗಳವಾರ ರಾತ್ರಿ ಸಿಂಧನೂರು, ಮಸ್ಕಿ ಹಾಗೂ ಜಿಲ್ಲೆಯ ಕೆಲವೆಡೆ ಸುರಿದ ಗುಡುಗು ಸಹಿತ ಭಾರಿ ಮಳೆಗೆ ಒಬ್ಬರು ಸಿಡಿಲಿಗೆ ಮೃತಪಟ್‌ಟಿದ್ದು, ಮೂರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಂಧನೂರು ತಾಲೂಕಿನಲ್ಲಿ ಭಾರಿ ಮಳೆಗೆ ಭತ್ತದ ಬೆಳೆ ನಾಶವಾದರೆ ಹಲವು ತಗ್ಗು ಪ್ರದೇಶಗಳಲ್ಲಿ ನೀರು ಹರಿದು ಜಲಾವೃತ್ತವಾಗಿ ಅಪಾರ ಹಾನಿಗೊಳಿಸಿತು. ಬುಧವಾರ ಸಂಜೆಯೂ ರಾಯಚೂರು ನಗರ, ಸಿಂಧನೂರು ಹಾಗೂ ಕೆಲವೆಡೆ ಗುಡುಗು ಸಹಿತ ಮಳೆ ಸುರಿದಿದೆ.
ರಾಯಚೂರು ನಗರದಲ್ಲಿ ಬೆಳಿಗ್ಗೆ ಸುಡು ಬಿಸಿಲಿನಿಂದ ಕೆಂಗೆಟ್ಟಿದ್ದ ಜನರಿಗೆ ಸಂಜೆಯ ಮಳೆ ತಂಪೆರಗಿತು. ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದ್ದು ಜನರು ಕೆಲಕಾಲ ಪರದಾಡಿದರು, ಕೆಲಸ ಕಾರ್ಯಗಳ ನಿಮಿತ್ತ ಹೊರಗೆ ಹೋಗಿದ್ದ ಜನರುಕೆಲಕಾಲ ಮಳೆಗೆ ಸಿಕ್ಕಿ ಸಮಸ್ಯೆ ಎದುರಿಸಿದರು.
ನಾಲ್ಕು ದಿನ ಮಳೆ :
ಹವಾಮಾನ ಇಲಾಖೆಯ ಪ್ರಕಾರ ಮೇ 15 ರಿಂದ 18 ರವರೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮೋಡಕವಿದ ವಾತಾವರಣವಿದ್ದು, ಅಲ್ಲಲ್ಲಿ ಸಾಧಾರಣ ಹಾಗೂ ಭಾರಿ ಮಳೆ ಸುರಿಯಲಿದೆ ಎಂದು ತಿಳಿಸಿದೆ. ಜೊತೆಗೆ ಗರಿಷ್ಠ 34ರಿಂದ 38 ಸೆಲ್ಸಿಯಸ್ ನಷ್ಟು ಉಷ್ಣಾಂಶ ಇರಲಿದೆ ಎಂದು ತಿಳಿಸಿದೆ.