ಸಿರವಾರ: ಕಾರ್ಮಿಕರಿಗೆ ಸಂಬಳ ನೀಡದ ಅಧಿಕಾರಿಗಳ ವಿರುದ್ಧ 20 ನೇ ದಿನಕ್ಕೆ ಕಾಲಿಟ್ಟ ಧರಣಿ
ಕಾರ್ಮಿಕರಿಗೆ ನಿಗದಿತ ದರ ನೀಡಿ ನ್ಯಾಯ ಒದಗಿಸಿ: ಆರ್. ಮಾನಸಯ್ಯ
ಸಿರವಾರ : ಗ್ಯಾಂಗ್ ಮನ್ ಗಳ ಮೂರು ತಿಂಗಳ ಹಣವನ್ನು ಪಾವತಿ ಮಾಡದೆ ಹಣ ನುಂಗಿದ ನೀರಾವರಿ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಹೇಳಿದರು.
ಪಟ್ಟಣದ ನೀರಾವರಿ ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಧರಣಿ ಹೋರಾಟದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು, ನೀರಾವರಿ ಇಲಾಖೆಯಲ್ಲಿ 15 ರಿಂದ 20 ಕೋಟಿ ರೂಪಾಯಿ ಭ್ರಷ್ಟಚಾರವಾಗಿದ್ದು, ಯಾರು ಕೇಳದಾಗಿದೆ. ಕಾರ್ಮಿಕರಿಗೆ ಸಿಗಬೇಕಾದ ಕಾನೂನಬದ್ಧ ಶೇ. 50% ರಷ್ಟು ಇಪಿಎಫ್, ಇಎಸ್ಐ ಹಣವನ್ನು ನೀರಾವರಿ ಇಲಾಖೆಯ ಅಧಿಕಾರಿ ವಿಜಯಲಕ್ಷ್ಮೀ ಪಾಟೀಲ್ ಹಾಗೂ ಸತ್ಯನಾರಾಯಣ ಶೆಟ್ಟಿ ಅವರು ಸಂಬಳದ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು.
ಕಾರ್ಮಿಕ ಸಚಿವರನ್ನು ಭೇಟಿಯಾಲಿರುವ ನಿಯೋಗ : ನಾಳೆ ಜಿಲ್ಲೆಗೆ ಆಗಮಿಸುತ್ತಿರುವ ಕಾರ್ಮಿಕ ಇಲಾಖೆ ಸಚಿವ ಸಂತೋಷ ಲಾಡ್ ಅವರನ್ನು ನಮ್ಮ ನಿಯೋಗದಿಂದ ಮನವಿ ಸಲ್ಲಿಸಲಾಗುವುದು, ತಕ್ಷಣ ನಮ್ಮ ಎಲ್ಲಾ ಬೇಡಿಕೆಗಳು ಈಡೇರಿಸಬೇಕು ಇಲ್ಲವಾದರೆ, 17 ರಂದು ವಿಭಾಗೀಯ ಕಚೇರಿಗೆ ಬೀಗ ಮುದ್ರೆ ಹಾಕಲಾಗುವುದು. 24 ಕ್ಕೆ ಇಡೀ ಜಿಲ್ಲೆಯ ಕಾರ್ಮಿಕರು ಸೇರಿ ದೇವದುರ್ಗ ಕ್ರಾಸ್ ರಸ್ತೆ ತಡೆದು ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತೆವೆ ಎಂದರು.
ಏಪ್ರಿಲ್, ಮೇ ಹಾಗೂ ಜೂನ್ ತಿಂಗಳುಗಳ ಸಂಬಳ ಪಾವತಿಸದೆ ಕಾರ್ಮಿಕರ ಜೀವನ ಬೀದಿಗೆ ಬರುವಂತಾಗಿದೆ. ಕಾರ್ಮಿಕರಿಗೆ ಬರಬೇಕಾದ ಹಣವನ್ನು ನುಂಗಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಂಡು ಕಾನೂನುಬದ್ಧವಾಗಿ ಕಾರ್ಮಿಕರಿಗೆ ನಿಗದಿತ ದರ 610/- ನೀಡಬೇಕೆಂದು ಮನವಿ ಮಾಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತುಂಗಭದ್ರ ನೀರಾವರಿ ವಲಯ ಹಂಗಾಮಿ ಕಾರ್ಮಿಕರ ಸಂಘ ತಾಲೂಕಧ್ಯಕ್ಷ ಅಮರೇಗೌಡ ಲಕ್ಕಂದಿನ್ನಿ, ಹಂಪಯ್ಯ, ವೀರೇಶ, ಹನುಮಂತ ಅಂಬಿಗೇರ, ರಮೇಶ ನಾಯಕ, ಭೀಮರಾಜ ಅಂಬಿಗೇರ, ಮಾರೆಪ್ಪ, ಯಲ್ಲಪ್ಪ, ಮಹೇಶ, ಮೌನೇಶ ಗೊಲದಿನ್ನಿ, ವೆಂಕಟೇಶ ಹಾಗೂ ರಾಜೇಶ ಇದ್ದರು.