×
Ad

ಸಿರವಾರ | ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ

Update: 2025-02-11 19:00 IST

ಸಿರವಾರ : 'ಬೇಸಿಗೆ ದಿನಗಳಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಬೇಕು' ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷ ವೈ.ಭೂಪನಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಲ ವಾರ್ಡ್ ಗಳಲ್ಲಿ ಕುಡಿಯುವ ನೀರಿಗಾಗಿ ಸಣ್ಣ ಪುಟ್ಟ ಸಮಸ್ಯೆಗಳಿದ್ದು, ಅವುಗಳನ್ನು ಸರಿಪಡಿಸುವ ಜೊತೆಗೆ ಬೇಸಿಗೆಯಲ್ಲಿ ನೀರಿನ ಕೊರತೆಯಾಗದಂತೆ ಬೋರ್ ವೆಲ್ ಗಳ ದುರಸ್ತಿ, ನೀರು ಪೋಲಾದಂತೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.

ಪಟ್ಟಣದಲ್ಲಿನ ಚರಂಡಿಗಳನ್ನು ತುಂಬಿದ್ದು, ಅವುಗಳ ಸ್ವಚ್ಛತೆ ಕೆಲಸ ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ, ಚರಂಡಿಯಿಂದ ತೆಗೆದ ಕಸ ವಿಲೇವಾರಿ ಮಾಡದೇ ಇರುವುದರಿಂದ ವಾರ್ಡ್ ಗಳಲ್ಲಿ ಸಾಕ್ರಮಿಕ ರೋಗಗಳ ಭಯ ಕಾಡುವಂತಾಗಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ನೂತನ ಲೇಔಟ್ ಗಳನ್ನು ಮಾಡುವ ಮೊದಲು ಎಲ್ಲಾ ಸದಸ್ಯರಿಗೆ ಮಾಹಿತಿ ನೀಡಬೇಕು, ಜೊತೆಗೆ ಅದರಿಂದಾಗುವ ಆಗು-ಹೋಗುಗಳನ್ನು ಪರಿಶೀಲಿಸಿ ಪರವಾನಿಗೆ ನೀಡಬೇಕು, ಪಟ್ಟಣದ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಪಾದಚಾರಿ ರಸ್ತೆಗಳ ಮೇಲಿರುವ ಅಕ್ರಮ ಡಬ್ಬಿಗಳನ್ನು ತೆರವುಗೊಳಿಸಿ ಪಾದಚಾರಿಗಳ ಅನುಕೂಲ ಮಾಡಿಕೊಡಬೇಕು,

ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಎರಡು ದಿನಕ್ಕೊಮ್ಮೆಯಾದರೂ ಫಾಗಿಂಗ್ ಮಾಡಬೇಕು, ವಾರ್ಡ್ ಗಳಲ್ಲಿನ ಕಸ ವಿವೇವಾರಿ ಪ್ರತಿನಿತ್ಯ ಮಾಡಬೇಕು, ವಾರದ ಸಂತೆ ನಡೆಸಲು ಸಂತೆ ಮಾರುಕಟ್ಟೆಯಲ್ಲಿ ಸೌಲಭ್ಯ, ತ್ಯಾಜ್ಯ ಹಾಕುವುದಕ್ಕೆ ಸ್ಥಳ ಪರಿಶೀಲನೆ, ಪಟ್ಟಣದಲ್ಲಿರುವ ಹಳ್ಳಗಳ ಪಕ್ಕದಲ್ಲಿ ತ್ಯಾಜ್ಯ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಪಟ್ಟಣ ಪಂಚಾಯತ್ ನ ಸಿಬ್ಬಂದಿ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸದಿರುವ ಬಗ್ಗೆ ಸರ್ವ ಸದಸ್ಯರಿಂದ ಆಕ್ರೋಶ ವ್ಯಕ್ತವಾಯಿತು.

ಅಧಿಕಾರಿಗಳ ಗೈರು :

ಸಾಮಾನ್ಯ ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನೋಟೀಸ್ ನೀಡಿದ್ದರೂ ಎರಡು ಇಲಾಖೆಯ ಅಧಿಕಾರಿಗಳ ಉಪಸ್ಥಿತಿ ಬಿಟ್ಟರೆ ಇನ್ನುಳಿದ ಅಧಿಕಾರಿಗಳ ಗೈರು ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಕೂಡಲೇ ಗೈರಾದ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಲಕ್ಷ್ಮಿ ಆದೆಪ್ಪ, ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ಸರ್ವಸದಸ್ಯರು, ಕಂದಾಯ ಅಧಿಕಾರಿ ಶ್ರೀನಾಥ ಸಭೆಯಲ್ಲಿ ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News