ಸಿರವಾರ | ತುಂಗಭದ್ರಾ ಕ್ರಸ್ಟರ್ ಗೇಟ್ ಅಳವಡಿಸಲು ಸೆ.8ರಂದು ಬೃಹತ್ ಪ್ರತಿಭಟನೆ
ಪಕ್ಷಾತೀತವಾಗಿ ಹೋರಾಟದಲ್ಲಿ ಪಾಲ್ಗೊಳ್ಳಿ : ಜಿ.ಲೋಕರೆಡ್ಡಿ
ಸಿರವಾರ : ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯವನ್ನು ತಕ್ಷಣ ಆರಂಭಿಸಬೇಕು ಎಂದು ಒತ್ತಾಯಿಸಿ ಸೆ.8ರಂದು ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನಲ್ಲಿ ರೈತ ಸಂಘಟನೆಯ ನೇತೃತ್ವದಲ್ಲಿ ೪ ಜಿಲ್ಲೆಯ ಎಲ್ಲಾ ಮುಖಂಡರುಗಳು ಪಕ್ಷಾತೀತ ಹೋರಾಟ ನಡೆಸಲಾಗುವುದು ಎಂದು ಹಿರಿಯ ವಾಣಿಜ್ಯೋದ್ಯಮಿ ಜಿ.ಲೋಕರೆಡ್ಡಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಿತ್ತು ಹೋಗಿ ಅಪಾರ ಪ್ರಮಾಣದ ನೀರು ನೆರೆಯ ರಾಜ್ಯಕ್ಕೆ ಹರಿದು ಹೋಗಿತ್ತು. ಈಗ ಶಿಥಿಲವಾಗಿರುವ ಗೇಟ್ ಅಳವಡಿಕೆ ಟೆಂಡರ್ ಕರೆಯಲಾಗಿದ್ದು, ನಿಧಾನಗತಿಯಿಂದ ಕೆಲಸ ನಡೆಯುತ್ತಿದೆ ಎಂದರು.
ಕಾಮಗಾರಿ ಮುಗಿದು ರೈತರಿಗೆ ಅನುಕೂಲವಾಗಲಿದೆ. ನೀರಾವರಿ ಇಲಾಖೆಯ ಅಧಿಕಾರಿಗಳು ಬೇಸಿಗೆ ಬೆಳೆಗೆ ನೀರಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಜಲಾಶಯದಲ್ಲಿ ತುಂಬಿರುವ ಹೂಳು ತೆಗೆಯಲು ಮುಂದಾಗುತ್ತಿಲ್ಲ. ನವಲಿ ಸಮತೋಲನ ಜಲಾಶಯವನ್ನೂ ನಿರ್ಮಾಣ ಮಾಡುತ್ತಿಲ್ಲ. ಸಿಬ್ಬಂದಿ ಕೊರತೆಯಿಂದ ನೀರು ನಿರ್ವಹಣೆ ಸಾಧ್ಯವಾಗಿಲ್ಲ ಎಂದು ಹೇಳಿದರು.
ನಂತರ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಜೆ.ಶರಣಪ್ಪ ಗೌಡ ಮಾತನಾಡಿ, ರಾಜ್ಯದಲ್ಲಿ ಯಾವುದೇ ಸರ್ಕಾರವಿರಲಿ, ಟಿಎಲ್ ಬಿಸಿ ನೀರಿಗಾಗಿ ಸಿರವಾರ ಪಟ್ಟಣದಲ್ಲಿ ಪ್ರತಿ ವರ್ಷ ರಸ್ತೆಗಿಳಿದು ಪ್ರತಿಭಟನೆ ಮಾಡುವುದು ತಪ್ಪುತ್ತಿಲ್ಲ. ಕೆಳ ಭಾಗದ ಜನರಿಗೆ ದೇವರ ಕರುಣೆ ತೋರಿದರೆ ಮಾತ್ರ ಬೆಳೆ ಬೆಳೆದು ಊಟ ಮಾಡುವ ಉದ್ಬವವಾಗಿದೆ ಎಂದ ಅವರು, ಜುಲೈನಲ್ಲಿ ಕಾಲುವೆಗೆ ನೀರು ಹರಿಸಿದರೆ ಸೆಪ್ಟೆಂಬರ್‌ನಲ್ಲಿ ಸಿರವಾರಕ್ಕೆ ನೀರು ಬಂದಿದೆ. ಅನಧಿಕೃತ ನೀರಾವರಿ ತಡೆಯಲು ಕಾನೂನು ರೂಪಿಸಿದ್ದರೂ ಜಾರಿಗೊಳಿಸುತ್ತಿಲ್ಲ. ಅಚ್ಚುಕಟ್ಟು ವ್ಯಾಪ್ತಿ ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ನಾಲ್ಕು ಜಿಲ್ಲೆಗಳು ವಿವಿಧ ರಾಜಕೀಯ ಪಕ್ಷಗಳ ನಾಯಕರು, ಸಂಘ ಸಂಸ್ಥೆಗಳ, ವರ್ತಕರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಮಾಜಿ ಶಾಸಕ ಗಂಗಾಧರ ನಾಯಕ, ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಮರೇಶ ಗೌಡ ಚಾಗಭಾವಿ, ಕಲ್ಲೂರು ಬಸವರಾಜ ನಾಯಕ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ದೇವರಾಜ ಗೌಡ, ರಾಜಪ್ಪ ಗೌಡ ಭಾಗ್ಯನಗರ ಕ್ಯಾಂಪ್, ರಮೇಶ ಚಿಂಚರಕಿ, ಉದಯ ಸಾಹುಕಾರ್ ಚಾಗಭಾವಿ, ಎಂ ಪ್ರಕಾಶಪ್ಪ, ಶ್ರೀನಿವಾಸ ಜಾಲಪೂರು ಕ್ಯಾಂಪ್, ರಾಮಯ್ಯ ಬೈನಾರ್, ಜಯಪ್ಪ ಗೌಡ ಜಕ್ಕಲದಿನ್ನಿ, ನಾಗರಾಜ ಗೌಡ, ಮೌಲಸಾಬ್ ಗಣದಿನ್ನಿ, ಚಂದ್ರಶೇಖರ ಚಾಗಭಾವಿ, ಈರಣ್ಣ ನಾಯಕ ಗಣದಿನ್ನಿ, ಈರನ ಗೌಡ, ಮಲ್ಲಪ್ಪ ನಾರಬಂಡಿ, ಶುಭಾಸ್ ಸಾಹುಕಾರ್ ಚಾಗಭಾವಿ, ವಿಜಯಪ್ರಕಾಶ, ಶರಣಗೌಡ ಶಾಖಪೂರು, ಗಣೇಶ ಚಾಗಭಾವಿ, ಲಿಂಗರೆಡ್ಡಿ, ನಿಂಬೆಯ್ಯ ತಾತ ಸೇರಿದಂತೆ ರೈತರಿದ್ದರು.