×
Ad

ರಾಯಚೂರು: ರಕ್ತದಾನಿಗಳಿಗೆ ವಿಶೇಷ ಸನ್ಮಾನ ಕಾರ್ಯಕ್ರಮ

Update: 2025-10-19 17:46 IST

ರಾಯಚೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ರೆಡ್ ರಿಬ್ಬನ್ ಕ್ಲಬ್‌ಗಳ ಇವರ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 18ರಂದು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ, ಅತಿ ಹೆಚ್ಚು ಬಾರಿಗೆ ರಕ್ತದಾನ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

70 ಬಾರಿ ರಕ್ತದಾನ ಮಾಡಿದ ಪೋತ್ನಾಳ ಗ್ರಾಮದ ಸತೀಶ್ ಫರ್ನಾಂಡಿಸ್, 50 ಬಾರಿಗೆ ರಕ್ತ ದಾನ ಮಾಡಿದ ರಾಯಚೂರಿನ ಚಂದ್ರಪ್ಪ ಮತ್ತು ಸಿಂಧನೂರಿನ ಬಸವರಾಜ ಹಾಗೂ 3 ಬಾರಿ ರಕ್ತ ದಾನ ಮಾಡಿದ ಕುಮಾರಿ ಮಲ್ಲಿಕಾ ಪೂಜಾರಿ ಅವರಿಗೆ ವಿವಿಧ ಗಣ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದ ಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ಸಂಕಷ್ಟದ ಸಂದರ್ಭದಲ್ಲಿ ರಕ್ತದಾನ ಮಾಡುವುದು ಅತ್ಯಂತ ಶ್ರೇಷ್ಠ ಕಾರ್ಯವಾಗಿದ್ದು, ಸ್ವಯಂಪ್ರೇರಿತ ರಕ್ತದಾನದ ಮೂಲಕ ಅಮೂಲ್ಯ ಜೀವನ ಉಳಿಸುವ ಪುಣ್ಯದ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಲು ಮುಂದೆ ಬರಬೇಕೆಂದು ಹೇಳಿದರು.

ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳಲ್ಲಿ ನಮ್ಮ ಜಿಲ್ಲೆಯವರೂ ಇದ್ದಾರೆ. ರಕ್ತದಾನದಿಂದ ಕೆಲವೇ ದಿನಗಳಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ, ರಕ್ತದೊತ್ತಡ, ಸಕ್ಕರೆ ಕಾಯಿಲೆಯಂತಹ ರೋಗಗಳು ದೂರವಾಗುತ್ತವೆ. ಹೊಸ ಚೈತನ್ಯ, ಉಲ್ಲಾಸ ಕಂಡುಬರುತ್ತದೆ ಎಂದರು.

ಈ ವೇಳೆ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಮಹಮ್ಮದ್ ಶಾಕೀರ್ ಮೊಹಿಯುದ್ದೀನ್ ಅವರು ಮಾತನಾಡಿ, ಈಗಾಗಲೇ ಜಿಲ್ಲೆಯಾದ್ಯಂತ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾಗುತ್ತಿದ್ದು, ರಕ್ತಕ್ಕೆ ವರ್ಷವಿಡಿ ನಿರಂತರವಾಗಿ ಬೇಡಿಕೆ ಇರುತ್ತದೆ. ಮುಖ್ಯವಾಗಿ ರಕ್ತಹೀನತೆಯಿಂದ ಬಳಲುವ ಗರ್ಭಿಣಿ ಸ್ತ್ರೀಯರು, ಹೆರಿಗೆ ಸಂದರ್ಭದಲ್ಲಿ, ತುರ್ತು ಶಸ್ತ್ರಚಿಕಿತ್ಸೆಗಳ ಸಂದರ್ಭಗಳಲ್ಲಿ, ಇತ್ತೀಚಿಗೆ ಹೆಚ್ಚಾಗುತ್ತಿರುವ ಅಪಘಾತಗಳು, ಕ್ಯಾನ್ಸರ್ ರೋಗಿಗಿಗಳು, ಥ್ಯಾಲಸೀಮಿಯಾ, ಹಿಮೊಫಿಲಿಯಾ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲಂಬಿಸಿರುತ್ತಾರೆ. ಈ ಎಲ್ಲ ಹಿನ್ನಲೆಯಲ್ಲಿ ಹೆಚ್ಚಿನ ರಕ್ತದ ಅವಶ್ಯಕತೆಯಿದ್ದು, 18 ವರ್ಷ ಮೇಲ್ಪಟ್ಟ ಆರೋಗ್ಯವಂತ ವ್ಯಕ್ತಿಯು ಯಾವುದೇ ಅಳುಕಿಲ್ಲದೆ ರಕ್ತದಾನ ಮಾಡುವಂತೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ನಂದಿತಾ ಎಮ್.ಎನ್, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಗಣೇಶ್, ಡಾ.ರಾಕೇಶ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಡ್ಯಾಪ್ಕೋ ಮೇಲ್ವಿಚಾರಕರಾದ ಮಲ್ಲಯ್ಯ ಮಠಪತಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್, ಸರೋಜಾ.ಕೆ, ಬ್ಲಡ್ ಬ್ಯಾಂಕ್ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News