ಈರಣ್ಣ ಬೆಂಗಾಲಿ ಬರೆದ ʼನಮ್ಮ ರಾಯಚೂರುʼ ಕೃತಿ ಲೋಕಾರ್ಪಣೆ ಮಾಡಿದ ಜಿಲ್ಲಾಧಿಕಾರಿ
ರಾಯಚೂರು : ರಾಯಚೂರು ಜಿಲ್ಲೆಯ ಮಾಹಿತಿ ಇರುವ, ಈರಣ್ಣ ಬೆಂಗಾಲಿ ಅವರು ಬರೆದ 'ನಮ್ಮ ರಾಯಚೂರು' ಎಂಬ ಪುಸ್ತಕವನ್ನು ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಇಂದು ತಮ್ಮ ಕಾರ್ಯಾಲಯದಲ್ಲಿ ಲೋಕಾರ್ಪಣೆ ಮಾಡಿದರು.
ರಾಯಚೂರು ಜಿಲ್ಲೆಯ ಇತಿಹಾಸ, ಸಂಸ್ಕೃತಿ, ಆರ್ಥಿಕತೆ, ರಾಜಕೀಯ, ಸಾಹಿತ್ಯ ಮತ್ತು ಸಾಮಾಜಿಕ ಬದುಕಿನ ಸಂಪೂರ್ಣ ಚಿತ್ರಣವನ್ನು ಹೊತ್ತಿರುವ 'ನಮ್ಮ ರಾಯಚೂರು' ಎಂಬ ಅಪೂರ್ವ ಗ್ರಂಥವಾಗಿದೆ.
ಜಿಲ್ಲಾಧಿಕಾರಿ ನಿತೀಶ್ ಕೆ ಅವರು ಕೃತಿಯ ಬಗ್ಗೆ ಮಾತನಾಡುತ್ತಾ, ''ಈರಣ್ಣ ಬೆಂಗಾಲಿಯವರು ರಾಯಚೂರಿನ ತತ್ವಪೂರ್ಣ ಚಿತ್ರಣ ನೀಡಿರುವುದು ಅತ್ಯಂತ ಶ್ಲಾಘನೀಯ. ಇಂತಹ ಕೃತಿಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಿಯಾಗುತ್ತದೆ. ಜಿಲ್ಲೆಯ ಅಭಿವೃದ್ಧಿಯ ಹಿನ್ನಲೆ ಮತ್ತು ಭವಿಷ್ಯವನ್ನೂ ಅರ್ಥಮಾಡಿಕೊಳ್ಳಲು ಈ ಕೃತಿ ಸಹಾಯಕವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಲೇಖಕ ಈರಣ್ಣ ಬೆಂಗಾಲಿ ಅವರು ಮಾತನಾಡುತ್ತಾ, ಈ ಕೃತಿಯು ಕೇವಲ ಇತಿಹಾಸದ ದಾಖಲೆಯಲ್ಲ, ರಾಯಚೂರಿನ ಜೀವಿತ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಜಿಲ್ಲೆಯ ಸಾಂಸ್ಕೃತಿಕ ಮಹಿಮೆ, ಶ್ರಮಜೀವಿಗಳ ಪೈಕಿ ಉಗಮವಾದ ಶಕ್ತಿಯ ಕುರಿತು ಇದು ಹೇಳುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ವೀರಹನುಮಾನ, ಪತ್ರಕರ್ತ ಕೆ.ಸತ್ಯನಾರಾಯಣ, ಸಾಮಾಜಿಕ ವಿಶ್ಲೇಷಕ ಕೆ.ಜಿ.ಜಗದೀಶ್ ಹಾಗೂ ಚರ್ಚಿತ ಬರಹಗಾರ ವೀರೇಶ್ ಅವರು ಉಪಸ್ಥಿತರಿದ್ದರು.