ಅಖಿಲ ಭಾರತ ಮುಷ್ಕರಕ್ಕೆ ಬೆಂಬಲಿಸಿ ರಾಯಚೂರಿನಲ್ಲಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ : ಕಾರ್ಮಿಕ ಸಂಹಿತೆ ರದ್ದತಿಗೆ ಒತ್ತಾಯ
ರಾಯಚೂರು: ಅಖಿಲ ಭಾರತ ಮಟ್ಟದ ಮುಷ್ಕರದ ಭಾಗವಾಗಿ ಇಂದು ಕೇಂದ್ರ ಸರ್ಕಾರ ಬಂಡವಾಳದ ಪರ ರೂಪಿಸಿದ ನಾಲ್ಕು ಕಾರ್ಮಿಕರ ವಿರೋಧಿ ಸಂಹಿತೆಗಳನ್ನು ಕೂಡಲೇ ರದ್ದುಪಡಿಸಲು ಒತ್ತಾಯಿಸಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ (ಜೆಸಿಟಿಯು) ಪದಾಧಿಕಾರಿಗಳು ಬುಧವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ದುಡಿತದ ಅವಧಿ ಹೆಚ್ಚಳ ವಾಪಸಾತಿ, ಕನಿಷ್ಠ ವೇತನ, ಸಾರ್ವತ್ರಿಕ ಪಿಂಚಣಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ ಪರ ಕೆಲಸ ಮಾಡುತ್ತಿದ್ದು, ಶೇ.70ರಷ್ಟು ಕಾರ್ಮಿಕರು ಈ ಕಾರ್ಮಿಕ ಸಂಹಿತೆಗಳ ವ್ಯಾಪ್ತಿಗೆ ಒಳಪಡುವುದಿಲ್ಲ. ಈ ಸಂಹಿತೆಗಳಿಂದ ಕಾರ್ಮಿಕರ ಜೀವಿಸುವ, ವೇತನ, ಮುಷ್ಕರ, ಹೋರಾಟ, ಸಾಮಾಜಿಕ ಭದ್ರತೆ, ಆರೋಗ್ಯ ಮತ್ತು ಸುರಕ್ಷತೆ ನಿಯಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿವೆ. ಹೀಗಿದ್ದಾಗ ಇಂತಹ ಕಾರ್ಮಿಕ ವಿರೋಧಿ ಸಂಹಿತೆಗಳ ಅವಶ್ಯಕತೆ ಕಾರ್ಮಿಕರಿಗಿಲ್ಲ. ಕಾರ್ಮಿಕರಿಗೆ ರಾಜ್ಯದಲ್ಲಿ ದುಡಿತದ ಅವಧಿ ದಿನಕ್ಕೆ 12 ಗಂಟೆಗೆ ಹೆಚ್ಚಿಸಿದ ಆದೇಶ ಹಿಂಪಡೆಯಬೇಕು ಎಂದು ಹೋರಾಟಗಾರರು ದೂರಿದರು.
ಅಸಂಘಟಿತ ವಲಯದ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತಾ ಸೌಲಭ್ಯ, ವಸತಿ ಒದಗಿಸಬೇಕು ಹಾಗೂ ರೈತ ವಿರೋಧಿ ತಿದ್ದಪಡಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಲಾಯಿತು.
ಕಾರ್ಮಿಕ ಮುಖಂಡರಾದ ವೀರೇಶ್ ಎನ್.ಎಸ್., ಮಹೇಶ್ ಚೀಕಲಪರ್ವಿ, ಕೆ.ಜಿ.ವೀರೇಶ, ಹೆಚ್.ಪದ್ಮಾ, ಶ್ರೀಶೈಲ ರೆಡ್ಡಿ, ಡಿ.ಎಸ್.ಶರಣಬಸವ, ತಿಮ್ಮಪ್ಪ ಸ್ವಾಮಿ, ಕಾಶಪ್ಪ, ವೀರನಗೌಡ, ಅಜೀಜ್ ಜಾಗೀರದಾರ್, ಮಹೇಶ ಚೀಕಲಪರ್ವಿ, ಎಂ.ರವಿ, ಸಲಾವುದ್ದೀನ್, ಅಣ್ಣಪ್ಪ, ನಾಗರಾಜ ಹಾಗೂ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.