×
Ad

ವೀರಶೈವ ಧರ್ಮ ಹೊಸದು ಅಲ್ಲ, ಬಸವಣ್ಣನವರು ಅದರ ಬೆಳಕಾದವರು : ಪಂಚಪೀಠಾಧೀಶರ ಅಭಿಪ್ರಾಯ

Update: 2025-10-06 23:00 IST

ರಾಯಚೂರು : ಬಸವಣ್ಣನವರು ವೀರಶೈವ ಧರ್ಮ ಸಂಸ್ಕೃತಿಯಲ್ಲಿ ಬಾಳಿ ಬೆಳಕಾದವರು, ಅವರು ಯಾವುದೇ ಹೊಸ ಧರ್ಮವನ್ನು ಹುಟ್ಟುಹಾಕಿಲ್ಲ. ಪಂಚಪೀಠಗಳು ಬಸವಣ್ಣನವರ ವಿರೋಧಿಗಳಲ್ಲ ಎಂದು ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಕೇದಾರ, ಶ್ರೀ ಶ್ರೀಶೈಲ ಮತ್ತು ಶ್ರೀ ಕಾಶೀ ಪಂಚಪೀಠ ಜಗದ್ಗುರುಗಳು ಸಂಯುಕ್ತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯ ಮಾನ್ವಿಯ ಕಲ್ಮಠದಲ್ಲಿ ನಡೆದ ದಸರಾ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಅವರು, ಬಸವಣ್ಣನವರಿಗಿಂತ ಮುಂಚೆಯೇ ವೀರಶೈವ ಧರ್ಮ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಎಲ್ಲರನ್ನೂ ಅಪ್ಪಿಕೊಂಡ ಬಸವಣ್ಣನವರ ಘನ ವ್ಯಕ್ತಿತ್ವ ಅಪಾರ. ಆದರೆ, ಇಂದು ಅವರ ಹೆಸರಿನಲ್ಲಿ ವೀರಶೈವ–ಲಿಂಗಾಯತ ಧರ್ಮವನ್ನು ವಿಭಜಿಸಲು ಯತ್ನಿಸಲಾಗುತ್ತಿರುವುದು ಖೇದಕರ ಎಂದು ಅಭಿಪ್ರಾಯಪಟ್ಟರು.

ಬಸವಣ್ಣನವರ ವಿಚಾರಧಾರೆಗಳನ್ನು ಹೇಳಿಕೊಳ್ಳುವವರು ಅವರ ಆದರ್ಶಗಳನ್ನು ಪಾಲಿಸುತ್ತಿಲ್ಲ. ಮಾತು ಒಂದು, ನಡೆಯುವುದು ಇನ್ನೊಂದು ಆಗಿದೆ. ವೀರಶೈವ ಅಥವಾ ಲಿಂಗಾಯತ ಧರ್ಮ ಹಿಂದೂ ಧರ್ಮದ ಅಂಗವಾಗಿದ್ದು, ಪ್ರತ್ಯೇಕ ಧರ್ಮವಲ್ಲ ಎಂದು ಸ್ಪಷ್ಟಪಡಿಸಿದರು.

ಸಂವಿಧಾನದಲ್ಲಿಯೂ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಸಿಕ್ಕಿಲ್ಲ. ರಾಜಕೀಯ ಪ್ರೇರಿತ ಶಕ್ತಿಗಳಿಂದಾಗಿ ಕೆಲವು ಸಂಘಟನೆಗಳು ವೀರಶೈವ–ಲಿಂಗಾಯತ ಸಮುದಾಯದೊಳಗೆ ಭಿನ್ನಾಭಿಪ್ರಾಯ ಉಂಟುಮಾಡುತ್ತಿವೆ, ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಪಂಚಪೀಠಾಧೀಶರು ಎಚ್ಚರಿಸಿದರು.

ಧರ್ಮದ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು. ರಾಜಕೀಯದಿಂದ ಧರ್ಮವನ್ನು ದೂರವಿರಿಸಲು ಅಗತ್ಯವಿದೆ. ಸಮಾಜವನ್ನು ಒಡೆಯುವ ಸಂಘಟನೆಗಳ ವಿರುದ್ಧ ಅಖಿಲ ಭಾರತ ವೀರಶೈವ ಮಹಾಸಭೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News